ನವದೆಹಲಿ: 2007ರ ಚೊಚ್ಚಲ ಪುರುಷರ ಟಿ20 ವಿಶ್ವಕಪ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಭಾರತದ ಆಲ್‌ರೌಂಡರ್ ಜೋಗಿಂದರ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಪತ್ರ ಬರೆದಿರುವ ಜೋಗಿಂದರ್ ಶರ್ಮಾ, ಇಂದು ಅಪಾರ ಕೃತಜ್ಞತೆ ಮತ್ತು ನಮ್ರತೆಯಿಂದ ನಾನು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. 2002ರಿಂದ 2017ರವರೆಗಿನ ನನ್ನ ಪ್ರಯಾಣವು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣಗಳಾಗಿದ್ದವು’ ಎಂದು ವಿವರಿಸಿದ್ದಾರೆ.
ಭಾರತದ ಪರ 2004 ರಿಂದ 2007ರವರೆಗೆ 4 ಏಕದಿನ ಮತ್ತು 4 ಟಿ20 ಪಂದ್ಯಗಳನ್ನು ಆಡಿದ್ದ ಜೋಗಿಂದರ್, ಎರಡೂ ಮಾದರಿಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಮೊದಲ ನಾಲ್ಕು ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು 16 ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2007ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳು ಎನಿಸಿದ್ದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಮೊತ್ತ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಮಿಸ್ಬಾ ಉಲ್ ಹಕ್ ಆಸರೆಯಾಗಿದ್ದರು. ಅವರ ಆಟದ ಬಲದಿಂದ ಪಾಕಿಸ್ತಾನ 19 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತ್ತು. ಹೀಗಾಗಿ ಅಂತಿಮ ಓವರ್‌ನಲ್ಲಿ 13 ರನ್ ಗಳಿಸಬೇಕಿತ್ತು.
ಪಾಕಿಸ್ತಾನ ಬಳಿ ಇದ್ದದ್ದು ಒಂದೇ ವಿಕೆಟ್ ಆದರೂ, ಸ್ಟ್ರೈಕ್‌ನಲ್ಲಿ ಮಿಸ್ಬಾ ಇದ್ದುದರಿಂದ ಜಯದ ಭರವಸೆ ಉಳಿದಿತ್ತು. ನಾನ್‌ಸ್ಟ್ರೈಕ್‌ನಲ್ಲಿ ವೇಗಿ ಮೊಹಮ್ಮದ್ ಆಸಿಫ್ ಉಳಿದಿದ್ದರು.
ರೋಚಕ ಪಂದ್ಯವು ಪ್ರೇಕ್ಷಕರನ್ನು ಕುರ್ಚಿ ತುದಿಗೆ ತಂದು ಕೂರಿಸಿತ್ತು. ಈ ವೇಳೆ ನಾಯಕ ಧೋನಿ ಅಚ್ಚರಿಯೆಂಬಂತೆ ಜೋಗಿಂದರ್ ಶರ್ಮಾಗೆ ಚೆಂಡು ನೀಡಿದ್ದರು. ಆಗ ಬಹುತೇಕರು ಇನ್ನೇನು ವಿಶ್ವಕಪ್ ಭಾರತದ ಕೈಯಿಂದ ಜಾರಿತು ಎಂದು ನಿರ್ಧರಿಸಿ ಬಿಟ್ಟಿದ್ದರು.
ಮೊದಲ ಎಸೆತವನ್ನೇ ವೈಡ್ ಎಸೆದ ಜೋಗಿಂದರ್ ನಂತರದ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಫುಲ್‌ಟಾಸ್ ಆಗಿ ಬಂದ ಎರಡನೇ ಎಸೆತವನ್ನು ಮಿಸ್ಬಾ ಸೀದಾ ಸಿಕ್ಸರ್‌ಗೆ ಎತ್ತಿದ್ದರು.
ಹೀಗಾಗಿ ಉಳಿದ ನಾಲ್ಕು ಎಸೆತಗಳಲ್ಲಿ ಪಾಕ್‌ಗೆ ಬೇಕಿದದ್ದು, 6 ರನ್ ಮಾತ್ರ. ಮೂರನೇ ಎಸೆತದಲ್ಲಿಯೂ ದೊಡ್ಡ ಹೊಡತಕ್ಕೆ ಯತ್ನಿಸಿದ ಮಿಸ್ಬಾ, ಶಾರ್ಟ್ ಫೈನ್‌ಲೆಗ್‌ನತ್ತ ಸ್ಕೂಪ್ ಶಾಟ್ ಪ್ರಯೋಗಿಸಿದ್ದರು. ಗಾಳಿಯಲ್ಲಿ ಹಾರಿದ ಚೆಂಡನ್ನು ಎಸ್. ಶ್ರೀಶಾಂತ್ ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ.
ಅಲ್ಲಿಗೆ ಪಂದ್ಯ ಮುಗಿಯಿತು. ಭಾರತ ಚೊಚ್ಚಲ ಟಿ20 ವಿಶ್ವಕಪ್ ವಿಜಯಿ ಎನಿಸಿತು. ನಾಯಕ ಧೋನಿ ಲಕ್ಕಿ ಕ್ಯಾಪ್ಟನ್ ಎನಿಸಿದರು. ಜೋಗಿಂದರ್ ಶರ್ಮಾ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.