ADVERTISEMENT

ಮಹಿಳಾ ಕ್ರಿಕೆಟ್ | ಭಾರತದ ಎದುರು ನ್ಯೂಜಿಲೆಂಡ್‌ಗೆ ಜಯ; ಸರಣಿ ಸಮಬಲ

ಕರ್ಮನ್‌ ಬಳಗಕ್ಕೆ ನಿರಾಶೆ; ರಾಧಾ ಯಾದವ್‌ ಮಿಂಚು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 23:30 IST
Last Updated 27 ಅಕ್ಟೋಬರ್ 2024, 23:30 IST
<div class="paragraphs"><p>ನ್ಯೂಜಿಲೆಂಡ್ ತಂಡದ&nbsp; ನಾಯಕಿ ಸೋಫಿ ಡಿವೈನ್</p></div>

ನ್ಯೂಜಿಲೆಂಡ್ ತಂಡದ  ನಾಯಕಿ ಸೋಫಿ ಡಿವೈನ್

   

ಚಚಿತ್ರಕೃಪೆ: X / @WHITE_FERNS

ಅಹಮದಾಬಾದ್: ನ್ಯೂಜಿಲೆಂಡ್ ತಂಡದ  ನಾಯಕಿ ಸೋಫಿ ಡಿವೈನ್ ಅವರ ಆಲ್‌ರೌಂಡ್ ಆಟದ ಮುಂದೆ ಭಾರತ ಮಹಿಳಾ ತಂಡವು ಇಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶರಣಾಯಿತು. 

ADVERTISEMENT

ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ 76 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ಇದರಿಂದಾಗಿ ಮಂಗಳವಾರ ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಕುತೂಹಲ ಮೂಡಿಸಿದೆ. 

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 86 ಎಸೆತಗಳಲ್ಲಿ 79 ರನ್‌ ಗಳಿಸಿದ ಸೋಫಿ ಡಿವೈನ್ ಅವರ ಬ್ಯಾಟಿಂಗ್‌ನಿಂದ ಕಿವೀಸ್‌ ಪಡೆಯು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 259 ರನ್ ಗಳಿಸಿತು. ಬೌಲಿಂಗ್‌ನಲ್ಲಿಯೂ ಮಿಂಚಿದ ಸೋಫಿ (27ಕ್ಕೆ3) ದಾಳಿಯಿಂದಾಗಿ ಭಾರತ ತಂಡವು 47.1 ಓವರ್‌ಗಳಲ್ಲಿ 183 ರನ್‌ ಗಳಿಸಿ ಆಲೌಟ್ ಆಯಿತು. 

ಬ್ಯಾಟಿಂಗ್‌ನಲ್ಲಿ ಸೋಫಿ ಅವರು ಮ್ಯಾಡಿ ಗ್ರೀನ್ (42; 41ಎಸೆತ) ಅವರೊಂದಿಗೆ 5ನೇ ವಿಕೆಟ್ ಜೊತೆಯಾಟದಲ್ಲಿ 82 ರನ್‌ ಸೇರಿಸಿದರು. ತಂಡದ ಆರಂಭಿಕ  ಜೋಡಿ ಸೂಝಿ ಬೇಟ್ಸ್‌ (58; 70ಎ) ಮತ್ತು ಜಾರ್ಜಿಯಾ ಪ್ರಿಮರ್ (41; 50ಎ)  ಮೊದಲ ವಿಕೆಟ್ ಜೊತೆಯಾಟದಲ್ಲಿ 87 ರನ್ ಸೇರಿಸಿದರು.  16ನೇ ಓವರ್‌ನಲ್ಲಿ ಜಾರ್ಜಿಯಾ ವಿಕೆಟ್ ಗಳಿಸಿದ ದೀಪ್ತಿ ಶರ್ಮಾ ಈ ಜೊತೆಯಾಟವನ್ನು ಮುರಿದರು. ಐದು ಓವರ್‌ಗಳ ನಂತರ ರಾಧಾ ಯಾದವ್ ಅವರು ತಮ್ಮದೇ ಓವರ್‌ನಲ್ಲಿ ಸೂಝಿ ಅವರ ಕ್ಯಾಚ್ ಪಡೆದರು. ಲಾರೆನ್‌ ಡೌನ್ ಅವರನ್ನು ರನ್‌ಔಟ್ ಮಾಡುವಲ್ಲಿ ಭಾರತದ ಫೀಲ್ಡರ್ ಪ್ರಿಯಾ ಮಿಶ್ರಾ ಪ್ರಮುಖ ಪಾತ್ರವಹಿಸಿದರು. ನಂತರ  ಪ್ರಿಯಾ ಅವರು ತಮ್ಮ ಬೌಲಿಂಗ್‌ನಲ್ಲಿ ಬ್ರೂಕ್ ಹ್ಯಾಲಿಡೇ ವಿಕೆಟ್ ಕೂಡ ಕಬಳಿಸಿದರು. ಇದರಿಂದಾಗಿ ತಂಡವು ಕುಸಿತದೆಡೆಗೆ ಸಾಗಿತ್ತು. 

ಆದರೆ ಇನ್ನೊಂದೆಡೆ ದಿಟ್ಟವಾಗಿ ಆಡುತ್ತಿದ್ದ ಸೋಫಿ ಅವರನ್ನು ಸೇರಿಕೊಂಡ ಮ್ಯಾಡಿ ಇನಿಂಗ್ಸ್‌ಗೆ ಬಲ ತುಂಬಿದರು. 

ಗುರಿ ಬೆನ್ನಟ್ಟಿದ ಆತಿಥೇಯ ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಸೋಫಿ ಮತ್ತು ಲಿಯಾ ತಹುಹು ಅವರ ಬೌಲಿಂಗ್ ಮುಂದೆ ತಂಡವು 102 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ನಾಯಕಿ ಹರ್ಮನ್ 35 ಎಸೆತಗಳಲ್ಲಿ 24 ರನ್‌ ಗಳಿಸಿದರು.  

ಬೌಲಿಂಗ್‌ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದ  ರಾಧಾ ಯಾದವ್ (48; 64ಎ, 4X5)  ಅವರು ಸೈಮಾ (29; 54ಎ, 4X3) ಅವರೊಂದಿಗೆ 9ನೇ ವಿಕೆಟ್‌ ಜೊತೆಯಾಟದಲ್ಲಿ 70 ರನ್‌ ಸೇರಿಸಿದರು. ಆದರೆ ಇದರಿಂದ  ಆತಿಥೇಯ ತಂಡವು ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಮಾತ್ರ ಸಾಧ್ಯವಾಯಿತು. 

ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 9ಕ್ಕೆ259 (ಸೂಝಿ ಬೇಟ್ಸ್ 58, ಜಾರ್ಜಿಯಾ ಪ್ರಿಮರ್ 41, ಸೋಫಿ ಡಿವೈನ್ 79, ಮ್ಯಾಡಿ ಗ್ರೀನ್ 42, ದೀಪ್ತಿ ಶರ್ಮಾ 30ಕ್ಕೆ2, ರಾಧಾ ಯಾದವ್ 69ಕ್ಕೆ4)

ಭಾರತ: 47.1 ಓವರ್‌ಗಳಲ್ಲಿ 183 (ಹರ್ಮನ್‌ಪ್ರೀತ್ ಕೌರ್ 24, ರಾಧಾ ಯಾದವ್ 48, ಸೈಮಾ ಠಾಕೋರ್ 29, ಲಿಯಾ ತಹುಹು 42ಕ್ಕೆ3, ಸೋಫಿ ಡಿವೈನ್ 27ಕ್ಕೆ3, ಎಡೆನ್ ಕಾರ್ಸನ್‌ 32ಕ್ಕೆ2)

ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 76 ರನ್‌ಗಳ ಜಯ. ಸರಣಿಯಲ್ಲಿ 1–1. ಮುಂದಿನ ಪಂದ್ಯ: ಅ.29.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.