ADVERTISEMENT

ಎರಡನೇ ಏಕದಿನ ಪಂದ್ಯ: ಇಶಾನ್‌ ಅರ್ಧಶತಕ; ಭಾರತ ಸಾಧಾರಣ ಮೊತ್ತ

ವಿಂಡೀಸ್‌ ಶಿಸ್ತಿನ ಬೌಲಿಂಗ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 22:22 IST
Last Updated 29 ಜುಲೈ 2023, 22:22 IST
ಅರ್ಧಶತಕ ಗಳಿಸಿದ ಇಶಾನ್‌ ಕಿಶನ್ –ಎಎಫ್‌ಪಿ ಚಿತ್ರ
ಅರ್ಧಶತಕ ಗಳಿಸಿದ ಇಶಾನ್‌ ಕಿಶನ್ –ಎಎಫ್‌ಪಿ ಚಿತ್ರ   

ಬಾರ್ಬೆಡೋಸ್: ವೆಸ್ಟ್‌ ಇಂಡೀಸ್‌ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ಪರದಾಡಿದ ಭಾರತ ತಂಡ, ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ, 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟಾಯಿತು. ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿದ ನಿರ್ಧಾರ ಹಿನ್ನಡೆ ಉಂಟುಮಾಡಿತು. ಇಶಾನ್‌ ಕಿಶನ್‌ (55 ರನ್‌, 55 ಎ., 4X6, 6X1) ಹೊರತುಪಡಿಸಿ ಇತರ ಬ್ಯಾಟರ್‌ಗಳು ವಿಫಲರಾದರು.

ಟಾಸ್‌ ಗೆದ್ದ ವಿಂಡೀಸ್‌ ತಂಡದ ನಾಯಕ ಶಾಯ್‌ ಹೋಪ್‌, ಬೌಲಿಂಗ್‌ ಮಾಡಲು ನಿರ್ಧರಿಸಿದರು. ಸರಣಿ ಗೆಲುವಿನ ಕನಸಿನೊಂದಿಗೆ ಆಡಲಿಳಿದ ಭಾರತ ತಂಡಕ್ಕೆ ಇಶಾನ್‌ ಮತ್ತು ಶುಭಮನ್‌ ಗಿಲ್‌ (34 ರನ್‌, 49 ಎ., 4X5) ಮೊದಲ ವಿಕೆಟ್‌ಗೆ 90 ರನ್‌ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಗಿಲ್‌ ಅವರನ್ನು ಔಟ್‌ ಮಾಡಿದ ಗುಡಾಕೇಶ್‌ ಮೋತಿ ಈ ಜತೆಯಾಟ ಮುರಿದರು. ರನ್‌ ವೇಗ ಹೆಚ್ಚಿಸಲು ಸಿಕ್ಸರ್‌ ಹೊಡೆಯುವ ಪ್ರಯತ್ನದಲ್ಲಿ ಗಿಲ್‌, ಅಲ್ಜರಿ ಜೋಸೆಫ್‌ಗೆ ಕ್ಯಾಚ್‌ ಕೊಟ್ಟರು.

ADVERTISEMENT

ಈ ವಿಕೆಟ್‌ ಬಿದ್ದ ಬಳಿಕ ಭಾರತದ ಅಗ್ರ ಕ್ರಮಾಂಕ ಹಠಾತ್‌ ಕುಸಿತ ಕಂಡಿತು. 7.2 ಓವರ್‌ಗಳ ಅಂತರದಲ್ಲಿ 23 ರನ್‌ಗಳಿಗೆ ಐದು ವಿಕೆಟ್‌ಗಳು ಪತನಗೊಂಡವು. ಆತಿಥೇಯ ತಂಡದ ವೇಗಿಗಳು ‘ಶಾರ್ಟ್‌ ಬಾಲ್‌’ ತಂತ್ರದ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು.

ಉತ್ತಮವಾಗಿ ಆಡುತ್ತಿದ್ದ ಇಶಾನ್‌, ಸತತ ಎರಡನೇ ಅರ್ಧಶತಕ ಗಳಿಸಿ ರೊಮಾರಿಯೊ ಶೆಫರ್ಡ್‌ಗೆ ವಿಕೆಟ್‌ ಒಪ್ಪಿಸಿದರು. ಸಂಜು ಸ್ಯಾಮ್ಸನ್‌ (9) ಮತ್ತು ಅಕ್ಷರ್‌ ಪಟೇಲ್‌ (1), ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಹಾರ್ದಿಕ್ ಪಾಂಡ್ಯ (7) ಕೂಡಾ ಬೇಗನೇ ಔಟಾದ ಕಾರಣ ಭಾರತ ಒತ್ತಡಕ್ಕೆ ಸಿಲುಕಿತು.

ಸೂರ್ಯಕುಮಾರ್‌ ಯಾದವ್‌ (24 ರನ್, 25 ಎ.) ಮತ್ತು ರವೀಂದ್ರ ಜಡೇಜ (10 ರನ್‌, 21 ಎ.) ಅವರು ತಂಡವನ್ನು ಕುಸಿತದಿಂದ ಪಾರು ಮಾಡಲು ನಡೆಸಿದ ಯತ್ನವೂ ವಿಫಲವಾಯಿತು. ಎರಡು ರನ್‌ಗಳ ಅಂತರದಲ್ಲಿ ಇವರಿಬ್ಬರು ಪೆವಿಲಿಯನ್‌ಗೆ ಮರಳಿದರು.

ರೊಮಾರಿಯೊ ಶೆಫರ್ಡ್‌ (37ಕ್ಕೆ 2) ಮತ್ತು ಅಲ್ಜರಿ ಜೋಸೆಫ್‌ (35ಕ್ಕೆ 2) ಅವರು ಬೌನ್ಸರ್‌ಗಳನ್ನು ಪರಿಣಾಮಕಾರಿಯಾಗಿ ಬಳಸಿದರೆ, ಎಡಗೈ ಸ್ಪಿನ್ನರ್‌ ಗುಡಾಕೇಶ್‌ ಮೋತಿ (36ಕ್ಕೆ 3) ಕೈಚಳಕ ಮೆರೆದರು.

ಭಾರತದ ಇನಿಂಗ್ಸ್‌ ವೇಳೆ ಮಳೆಯಿಂದಾಗಿ ಎರಡು ಸಲ ಆಟ ಅಲ್ಪಹೊತ್ತು ಸ್ಥಗಿತಗೊಂಡಿತು. ಮೊದಲ ಏಕದಿನ ಪಂದ್ಯವನ್ನು ಐದು ವಿಕೆಟ್‌ಗಳಿಂದ ಗೆದ್ದಿರುವ ಪ್ರವಾಸಿ ತಂಡ, ಸರಣಿಯಲ್ಲಿ 1–0 ಯಿಂದ ಮುನ್ನಡೆಯಲ್ಲಿದೆ. ಅಂತಿಮ ಪಂದ್ಯ ಮಂಗಳವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್: ಭಾರತ 40.5 ಓವರ್‌ಗಳಲ್ಲಿ 181 (ಇಶಾನ್‌ ಕಿಶನ್‌ 55, ಶುಭಮನ್‌ ಗಿಲ್ 34, ಸಂಜು ಸ್ಯಾಮ್ಸನ್ 9, ಸೂರ್ಯಕುಮಾರ್‌ ಯಾದವ್ 24, ರವೀಂದ್ರ ಜಡೇಜ 10, ಶಾರ್ದೂಲ್‌ ಠಾಕೂರ್‌ 16, ರೊಮಾರಿಯೊ ಶೆಫರ್ಡ್ 37ಕ್ಕೆ 3, ಗುಡಾಕೇಶ್‌ ಮೋತಿ 36ಕ್ಕೆ 3, ಅಲ್ಜರಿ ಜೋಸೆಫ್‌ 35ಕ್ಕೆ 2)

ರೋಹಿತ್‌, ಕೊಹ್ಲಿಗೆ ವಿಶ್ರಾಂತಿ
ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಮತ್ತು ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಈ ಪಂದ್ಯದಲ್ಲಿ ಆಡಲಿಲ್ಲ. ರೋಹಿತ್‌ ಅನುಪಸ್ಥಿತಿಯಲ್ಲಿ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಿದರು. ‘ತಂಡದ ಸಂಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅದಕ್ಕಾಗಿ ವಿರಾಟ್‌ ಮತ್ತು ರೋಹಿತ್‌ಗೆ ವಿಶ್ರಾಂತಿ ನೀಡಲಾಗಿದೆ’ ಎಂದು ಹಾರ್ದಿಕ್‌ ಹೇಳಿದರು. ಸಂಜು ಸ್ಯಾಮ್ಸನ್‌ ಮತ್ತು ಅಕ್ಷರ್‌ ಪಟೇಲ್‌ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.