ಗಯಾನ: ಯುವ ಆಟಗಾರರಿರುವ ಭಾರತ ತಂಡವು ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಈ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಭಾರತ ತಂಡವು ಮುಗ್ಗರಿಸಿತ್ತು.
ಸಾಧಾರಣ ಮೊತ್ತದ ಗುರಿಯೊಡ್ಡಿದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್‌ನಲ್ಲಿ ಮಿಂಚಿತ್ತು. ರೋಚಕ ಜಯ ಸಾಧಿಸಿತ್ತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಇಶಾನ್ ಕಿಶನ್, ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ವಿಫಲರಾದರು. ಪದಾರ್ಪಣೆ ಪಂದ್ಯ ಆಡಿದ ತಿಲಕ್ ವರ್ಮಾ ಮಾತ್ರ ಗಮನ ಸೆಳೆದರು.
ಇನಿಂಗ್ಸ್‌ನ ಕೊನೆ ಹಂತದ ಓವರ್‌ನಲ್ಲಿ ’ಫಿನಿಷರ್‘ ಪಾತ್ರ ನಿಭಾಯಿಸುವ ಬ್ಯಾಟರ್ ಕೊರತೆ ಎದ್ದುಕಂಡಿತು. ಅನುಭವಿಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ ಈ ಸರಣಿಯಲ್ಲಿ ಆಡುತ್ತಿಲ್ಲ. ಅವರ ಗೈರುಹಾಜರಿಯಲ್ಲಿ ಯುವ ಆಟಗಾರರು ಅವಕಾಶ ಪಡೆದಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿರುವ ವಿಂಡೀಸ್ ಬಳಗಕ್ಕೆ ಎರಡನೇ ಪಂದ್ಯದಲ್ಲಿ ಕಡಿವಾಣ ಹಾಕುವ ಸವಾಲು ಯುವಪಡೆಯ ಮುಂದಿದೆ.
ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಸಾಧಾರಣ ಎನಿಸಿಕೊಂಡಿರುವ ಆತಿಥೇಯ ಬಳಗವು ಟಿ20 ಮಾದರಿಯಲ್ಲಿ ಬಲಿಷ್ಠವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ತಂಡದ ನಾಯಕ ರೋವ್ಮನ್ ಪೊವೆಲ್ ಮತ್ತು ನಿಕೊಲಸ್ ಪೂರನ್ ಅವರು ಕಳೆದ ಪಂದ್ಯದಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಡೆದಿದ್ದರು. ಅಗ್ರಕ್ರಮಾಂಕದ ಬ್ಯಾಟರ್ ಕೈಲ್ ಮೇಯರ್ಸ್, ಚಾರ್ಲ್ಸ್, ಬ್ರೆಂಡನ್ ಕಿಂಗ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್ ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚುವುದು ಖಚಿತ.
ಬೌಲಿಂಗ್ ವಿಭಾಗದಲ್ಲಿ ಅನುಭವಿ ಜೇಸನ್ ಹೋಲ್ಡರ್, ಒಬೆದ್ ಮೆಕಾಯ್ ಮತ್ತು ರೊಮೆರಿಯೊ ಶೆಫರ್ಡ್ ಅವರು ಭಾರತದ ಬ್ಯಾಟಿಂಗ್ ಪಡೆಗೆ ಮತ್ತೊಮ್ಮೆ ಕಠಿಣ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ಭಾರತದ ಬೌಲರ್‌ಗಳಲ್ಲಿ ಆರ್ಷದೀಪ್ ಸಿಂಗ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಆರ್ಷದೀಪ್ ಕೊನೆಯ ಹಂತದ ಓವರ್‌ಗಳಲ್ಲಿ ವೈಡ್ ಎಸೆತಗಳನ್ನು ನಿಯಂತ್ರಿಸಿದರೆ ತಂಡಕ್ಕೆ ಮತ್ತಷ್ಟು ನೆರವು ಸಿಗಬಹುದು.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಡಿಡಿ ಸ್ಪೋರ್ಟ್ಸ್, ಜಿಯೊ ಸಿನೆಮಾ, ಫ್ಯಾನ್‌ಕೋಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.