ADVERTISEMENT

ಮಹಿಳಾ ಟಿ20: ಮಿಂಚಿದ ದೀಪ್ತಿ -ಶಫಾಲಿ, ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಜಯ

ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 8 ರನ್‌ ಜಯ

ಪಿಟಿಐ
Published 11 ಜುಲೈ 2023, 13:47 IST
Last Updated 11 ಜುಲೈ 2023, 13:47 IST
ಶಫಾಲಿ ವರ್ಮಾ
ಶಫಾಲಿ ವರ್ಮಾ   – ಎಎಫ್‌ಪಿ ಚಿತ್ರ

ಮೀರ್‌ಪುರ: ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ಮಹಿಳಾ ತಂಡ, ಎರಡನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 8 ರನ್‌ಗಳ ಗೆಲುವು ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ಬಳಗ, ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 95 ರನ್‌ ಕಲೆಹಾಕಿತು. ಟಿ20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತದ ಕನಿಷ್ಠ ಮೊತ್ತ ಇದು.

ಆದರೆ ಬ್ಯಾಟಿಂಗ್‌ ವೈಫಲ್ಯವನ್ನು ಬೌಲಿಂಗ್‌ನಲ್ಲಿ ಮರೆಮಾಚಿದ ಭಾರತ, ಎದುರಾಳಿ ತಂಡವನ್ನು 87 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನ ಮೂಲಕ ಭಾರತ, ಮೂರು ಪಂದ್ಯಗಳ ಸರಣಿಯಲ್ಲಿ 2–0 ರಿಂದ ಮುನ್ನಡೆ ಸಾಧಿಸಿತು. ಸರಣಿಯ ಕೊನೆಯ ಪಂದ್ಯ ಗುರುವಾರ ನಡೆಯಲಿದೆ.

ADVERTISEMENT

ಯುವ ಸ್ಪಿನ್ನರ್‌ಗಳಾದ ಮಿನ್ನು ಮಣಿ (4-1-9-2) ಮತ್ತು ಅನುಷಾ ಬಾರೆಡ್ಡಿ (20ಕ್ಕೆ 1) ಅವರು ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರೆ, ಅನುಭವಿಗಳಾದ ದೀಪ್ತಿ (12ಕ್ಕೆ 3) ಮತ್ತು ಶಫಾಲಿ (15ಕ್ಕೆ 3) ಅವರು 19 ಮತ್ತು 20ನೇ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ಸಂಘಟಿಸಿದರು.

ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾ, 5 ವಿಕೆಟ್‌ಗಳಿಗೆ 86 ರನ್‌ ಗಳಿಸಿ ಗೆಲುವಿನತ್ತ ಹೆಜ್ಜೆಯಿಟ್ಟಿತ್ತು. ಆದರೆ ಕೊನೆಯಲ್ಲಿ ಎದುರಾದ ಒತ್ತಡ ನಿಭಾಯಿಸಲು ವಿಫಲವಾಯಿತು. ಎಂಟು ಎಸೆತಗಳ ಅಂತರದಲ್ಲಿ ಕೇವಲ ಒಂದು ರನ್‌ಗೆ ಅಂತಿಮ ಐದು ವಿಕೆಟ್‌ ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.

ಶಫಾಲಿ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿ ಬಾಂಗ್ಲಾ ಜಯಕ್ಕೆ 10 ರನ್‌ಗಳು ಬೇಕಿದ್ದವು. 4 ವಿಕೆಟ್‌ಗಳು ಕೈಯಲ್ಲಿದ್ದವು. ಮೊದಲ ಎಸೆತದಲ್ಲಿ ಒಂದು ರನ್‌ ಬಂದರೂ, ರಬೆಯಾ ಖಾನ್‌ ರನೌಟ್‌ ಆದರು. ಶಫಾಲಿ, ಇನ್ನುಳಿದ ಐದು ಎಸೆತಗಳಲ್ಲಿ ಯಾವುದೇ ರನ್‌ ಬಿಟ್ಟುಕೊಡದೆ ಮೂರು ವಿಕೆಟ್‌ ಪಡೆದರು. ಬಾಂಗ್ಲಾ ನಾಯಕಿ ನಿಗಾರ್‌ ಸುಲ್ತಾನಾ (38) ಅವರ ಹೋರಾಟ ವ್ಯರ್ಥವಾಯಿತು.

ಇದಕ್ಕೂ ಮುನ್ನ ಭಾರತ, ಆಫ್‌ಸ್ಪಿನ್ನರ್‌ ಸುಲ್ತಾನಾ ಖಾತೂನ್‌ ಮತ್ತು ಫಹೀಮಾ ಖಾತೂನ್ ಅವರ ಪ್ರಭಾವಿ ಬೌಲಿಂಗ್‌ ಮುಂದೆ ಪರದಾಡಿತು. ಶಫಾಲಿ (19 ರನ್, 14 ಎ.) ಗರಿಷ್ಠ ಸ್ಕೋರರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 95 (ಸ್ಮೃತಿ ಮಂದಾನ 13, ಶಫಾಲಿ ವರ್ಮಾ 19, ಯಸ್ಟಿಕಾ ಭಾಟಿಯಾ 11, ದೀಪ್ತಿ ಶರ್ಮಾ 10, ಅಮನ್‌ಜ್ಯೋತ್‌ ಕೌರ್‌ 14, ಸುಲ್ತಾನಾ ಖಾತೂನ್‌ 21ಕ್ಕೆ 3, ಫಹೀಮಾ ಖಾತೂನ್ 16ಕ್ಕೆ 2)

ಬಾಂಗ್ಲಾದೇಶ 20 ಓವರ್‌ಗಳಲ್ಲಿ 87 (ನಿಗಾರ್‌ ಸುಲ್ತಾನಾ 38, ಶೋರ್ನ ಅಖ್ತರ್‌ 7, ದೀಪ್ತಿ ಶರ್ಮಾ 12ಕ್ಕೆ 3, ಶಫಾಲಿ ವರ್ಮಾ 15ಕ್ಕೆ 3, ಮಿನ್ನು ಮಣಿ 9ಕ್ಕೆ 2) ಫಲಿತಾಂಶ: ಭಾರತಕ್ಕೆ 8 ರನ್‌ಗಳ ಗೆಲುವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.