ಸೆಂಚುರಿಯನ್: ಭಾರತ, ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಬುಧವಾರ ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ತನಗೆ ಅಷ್ಟೇನೂ ಪರಿಚಿತವಲ್ಲದ ಈ ತಾಣದಲ್ಲಿ ಬ್ಯಾಟಿಂಗ್ ವೈಭವವನ್ನು ಮರಳಿ ಕಂಡುಕೊಳ್ಳುವ ಸವಾಲು ತಂಡದ ಮುಂದಿದೆ.
2009ರ ನಂತರ ಒಮ್ಮೆ ಮಾತ್ರ ಭಾರತ ಇಲ್ಲಿ ಟಿ20 ಪಂದ್ಯ ಆಡಿದೆ. 2018ರಲ್ಲಿ ನಡೆದ ಆ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಈಗ ತಂಡದಲ್ಲಿರುವವರಲ್ಲಿ ಹಾರ್ದಿಕ್ ಪಾಂಡ್ಯ ಮಾತ್ರ ಆ ಪಂದ್ಯ ಆಡಿದ್ದರು. ಮೂರು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮನಾಗಿದೆ.
ಪರಿಚಿತವಲ್ಲದ ತಾಣದಲ್ಲಿ ಹೊಂದಿಕೊಳ್ಳುವುದರ ಜೊತೆ ತಂಡಕ್ಕೆ ಸವಾಲಾಗಿರುವ ಇನ್ನೊಂದು ವಿಷಯ ಎಂದರೆ ಬ್ಯಾಟರ್‌ಗಳ ಲಯ ಅಷ್ಟೇನೂ ಉತ್ತಮ ಮಟ್ಟದಲ್ಲಿ ಇಲ್ಲದಿರುವುದು. ಗೆಬೆರ್ಹಾದ ರೀತಿ ಇಲ್ಲಿನ ಪಿಚ್ ಕೂಡ ಮೇಲ್ನೋಟಕ್ಕೆ ವೇಗ ಮತ್ತು ಬೌನ್ಸ್‌ಗೆ ನೆರವಾಗುವಂತಿದೆ.
ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳ ಎದುರು ಬ್ಯಾಟರ್‌ಗಳು ಪರದಾಡಿದರು. ಹೀಗಾಗಿ ತಂಡ 6 ವಿಕೆಟ್‌ಗೆ 124 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಸೆಂಚುರಿಯನ್ ಕ್ರೀಡಾಂಗಣ ಕೂಡ ಇಂಥ ಸ್ವರೂಪ ಹೊಂದಿದೆ.
ಸಮಸ್ಯೆ ಆರಂಭದಿಂದಲೇ ಶುರುವಾಗುತ್ತಿದೆ. ಅಭಿಷೇಕ್ ಶರ್ಮಾ ಅವರ ಪರದಾಟ ಮುಂದುವರಿದಿದ್ದು ಗಂಭೀರ ಚಿಂತೆಗೆ ಕಾರಣವಾಗಿದೆ. ಕಳೆದ ಎಂಟು ಇನಿಂಗ್ಸ್‌ಗಳಿಂದ ಅವರೂ ಒಂದೂ 20ರ ಮೇಲೆ ರನ್ ಗಳಿಸಿಲ್ಲ. ಸಂಜು ಸ್ಯಾಮ್ಸನ್ ಜೊತೆ ಆರಂಭ ಆಟಗಾರನ ಪಾತ್ರವನ್ನು ತಿಲಕ್ ವರ್ಮಾ ಅವರಿಗೆ ವಹಿಸಿ, ಮಧ್ಯಮ ಕ್ರಮಾಂಕದಲ್ಲಿ ಬೀಸಾಟವಾಡುವ ರಮಣದೀಪ್ ಸಿಂಗ್ ಅವರಿಗೆ ಅವಕಾಶ ನೀಡುವ ಯೋಚನೆ ಸುಳಿದಿದೆ.
ಆದರೆ ಅಭಿಷೇಕ್ ಅಷ್ಟೇ ಅಲ್ಲ, ಸೀನಿಯರ್ ಬ್ಯಾಟರ್‌ಗಳಾದ ನಾಯಕ ಸೂರ್ಯಕುಮಾರ್ ಯಾದವ್, ಪಾಂಡ್ಯ, ರಿಂಕು ಸಿಂಗ್ ಕೂಡ ಅವರೂ ಕೂಡ ಬ್ಯಾಟಿಂಗ್ ಹಿನ್ನಡೆಗೆ ಹೊಣೆ ವಹಿಸಬೇಕಾಗಿದೆ. ಸೂರ್ಯ ಮತ್ತು ರಿಂಕು ತಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿ ಆಡಿಲ್ಲ. ರಿಂಕು ಮೊದಲ ಬೌಂಡರಿಗೆ 28 ಎಸೆತಗಳನ್ನು ತೆಗೆದುಕೊಂಡಿದ್ದರು.
ಇವರು ಉತ್ತಮ ಕಾಣಿಕೆ ನೀಡಿದರಷ್ಟೇ ಸಂಜು ಸ್ಯಾಮ್ಸನ್ ಅವರ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಬೌಲರ್‌ಗಳೂ ಸ್ಥಿರ ಪ್ರದರ್ಶನ ನೀಡಿಲ್ಲ. ಡರ್ಬನ್‌ನಲ್ಲಿ ಅರ್ಷದೀಪ್ 25 ರನ್ನಿಗೆ 1 ವಿಕೆಟ್ ಪಡೆದರೆ, ಎರಡನೇ ಪಂದ್ಯದಲ್ಲಿ 41 ರನ್ನಿಗೆ 1 ವಿಕೆಟ್ ಗಳಿಸಿದ್ದರು. ಕೊನೆಯ ಪಂದ್ಯದ ಕೊನೆಯ ಓವರ್‌ನಲ್ಲಿ ಎಡಗೈ ವೇಗಿ ಬೌಲಿಂಗ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ 4 ಬೌಂಡರಿ ಬಾರಿಸಿದ್ದರು. ಅಲ್ಪಸ್ಕೋರುಗಳ ಪಂದ್ಯದಲ್ಲಿ ಇದು ದುಬಾರಿಯಾಯಿತು.
ತಂಡ ಯಶ್ ದಯಾಳ್ ಅಥವಾ ವೈಶಾಖ ವಿಜಯಕುಮಾರ್ ಅವರಿಗೆ ಅವಕಾಶ ಕೊಡಬಹುದೇ ಎಂಬುದು ಖಚಿತವಾಗಿಲ್ಲ.
ಆದರೆ ‘ಗೂಢ’ ಎಸೆತಗಳ ಬೌಲರ್ ವರುಣ್ ಚಕ್ರವರ್ತಿ ಮೊದಲ ಬಾರಿ 5 ವಿಕೆಟ್ ಗೊಂಚಲು ಪಡೆದು ಸೋಲಿನಲ್ಲೂ ಮಿಂಚಿದ್ದರು. ಅವರ ಜೊತೆ ರವಿ ಬಿಷ್ಣೋಯಿ ಕೂಡ ಉತ್ತಮ ಪ್ರದರ್ಶನ ನೀಡಿರುವುದು ಸಮಾಧಾನದ ಅಂಶ.
ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳೂ ಪರದಾಡಿದ್ದಾರೆ. ಮರ್ಕರಂ, ಮಿಲ್ಲರ್ ಮತ್ತು ಕ್ಲಾಸೆನ್ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಆಡಿಲ್ಲದಿರುವುದು ಆತಿಥೇಯರ ಚಿಂತೆಗೆ ಕಾರಣವಾಗಿದೆ. ಟ್ರಿಸ್ಟನ್ ಸ್ಟಬ್ಸ್ ಕಳೆದ ಪಂದ್ಯದಲ್ಲಿ ಉಪಯುಕ್ತ ಆಟವಾಡಿದ್ದರು. ಜೆರಾಲ್ಡ್ ಕೋಟ್ಜಿಯಾ ಅವರೂ ಕೆಳಕ್ರಮಾಂಕದಲ್ಲಿ ಆಡಿದ್ದರಿಂದ ಎರಡನೇ ಪಂದ್ಯದಲ್ಲಿ ಆತಿಥೇಯರು ಗೆಲ್ಲಲು ಸಾಧ್ಯವಾಯಿತು.
ಪಂದ್ಯ ಆರಂಭ: ರಾತ್ರಿ 8.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.