ಜೋಹಾನ್ಸ್‌ಬರ್ಗ್: ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಶತಕ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ದಾಳಿಯ ನೆರವಿನಿಂದ ಭಾರತ ತಂಡವು ಗುರುವಾರ ಇಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್‌ಗಳಿಂದ ಜಯ ಸಾಧಿಸಿತು.
ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದವು. ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಆತಿಥೇಯ ತಂಡವು 5 ವಿಕೆಟ್‌ಗಳಿಂದ ಗೆದ್ದಿತ್ತು.
ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೂರ್ಯಕುಮಾರ್ (100; 56ಎ, 4x7, 6x8) ಮತ್ತು ಯಶಸ್ವಿ ಜೈಸ್ವಾಲ್ (60; 41ಎ;4x6, 6x3) ಶತಕದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 201 ರನ್ ಗಳಿಸಿತು.
ಸವಾಲಿನ ರನ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ಬೌಲರ್‌ಗಳ ಸ್ಪೀನ್ ದಾಳಿಯೆದುರು ತತ್ತರಿಸಿತು. ಹೀಗಾಗಿ, 13.5 ಓವರ್‌ಗಳಲ್ಲಿ 95 ರನ್‌ಗೆ ಆಲೌಟ್ ಆಯಿತು. ಕುಲದೀಪ್ 17ಕ್ಕೆ ಐದು ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಕೇಶವ ಮಹಾರಾಜ್ ಮತ್ತು ತಬ್ರೇಜ್ ಶಂಸಿ ಅವರ ಸ್ಪಿನ್ ಮೋಡಿಗೆ ಭಾರತ ತಂಡವು ಆರಂಭಿಕ ಆಘಾತ ಎದುರಿಸಿತು. ಮೂರು ಓವರ್ ಮುಗಿಯುವ ಮುನ್ನವೇ ಶುಭಮನ್ ಗಿಲ್ ಮತ್ತು ತಿಲಕ್ ವರ್ಮಾ ಪೆವಿಲಿಯನ್ ಸೇರಿಯಾಗಿತ್ತು.
ಕ್ರೀಸ್‌ನಲ್ಲಿದ್ದ ಯಶಸ್ವಿ ಜೈಸ್ವಾಲ್ ಜೊತೆಗೂಡಿದ ನಾಯಕ ಸೂರ್ಯ ಪ್ರಜ್ವಲಿಸಿದರು. ಇವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 128 ರನ್ ಸೇರಿಸಿದರು. ಆತಿಥೇಯ ತಂಡದ ಎಲ್ಲ ಬೌಲರ್‌ಗಳಿಗೂ ಸೂರ್ಯ ಬಿಸಿ ಮುಟ್ಟಿಸಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಟಿ20 ಮಾದರಿಯಲ್ಲಿ ಮೂರನೇ ಶತಕ ಪೂರೈಸಿ ಸಂಭ್ರಮಿಸಿದ ನಂತರದ ಎಸೆತದಲ್ಲಿ ಬ್ರೀಟ್ಜ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ವಿಕೆಟ್ ಪಡೆದ ಲಿಜಾದ್ ವಿಲಿಯಮ್ಸ್ ಸಮಾಧಾನದ ನಿಟ್ಟುಸಿರು ಬಿಟ್ಟರು.
ಇನ್ನೊಂದು ಬದಿಯಲ್ಲಿದ್ದ ಯಶಸ್ವಿ 14ನೇ ಓವರ್‌ನಲ್ಲಿ ಅವರು ತಬ್ರೇಜ್ ಶಂಸಿ ಬೌಲಿಂಗ್‌ನಲ್ಲಿ ರೀಜಾಗೆ ಕ್ಯಾಚಿತ್ತರು. ಇದರೊಂದಿಗೆ ಜೊತೆಯಾಟವೂ ಮುರಿಯಿತು. ಅವರ ನಂತರ ಬಂದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲಿಲ್ಲ. ರಿಂಕು ಸಿಂಗ್ ಒಂದು ಸಿಕ್ಸರ್ ಇದ್ದ 10 ರನ್ ಗಳಿಸಿದರು. ಆದರೆ ಸೂರ್ಯ, ರನ್ ಗಳಿಸುವ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದರು.
ದಕ್ಷಿಣ ಆಫ್ರಿಕಾದ ಪರ ಡೇವಿಡ್ ಮಿಲ್ಲರ್ (35; 25ಎ), ನಾಯಕ ಏಡಮ್ ಮರ್ಕರಂ (25; 14ಎ) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 201 (ಯಶಸ್ವಿ ಜೈಸ್ವಾಲ್ 60, ಸೂರ್ಯಕುಮಾರ್ ಯಾದವ್ 100, ರಿಂಕು ಸಿಂಗ್ 14, ಕೇಶವ್ ಮಹಾರಾಜ್ 26ಕ್ಕೆ2, ಲಿಝಾದ್ ವಿಲಿಯಮ್ಸ್ 46ಕ್ಕೆ2, ನಾಂದ್ರೆ ಬರ್ಗರ್ 43ಕ್ಕೆ1, ತಬ್ರೇಜ್ ಶಂಸಿ 38ಕ್ಕೆ1)
ದಕ್ಷಿಣ ಆಫ್ರಿಕಾ: 13.5 ಓವರ್‌ಗಳಲ್ಲಿ 95 (ಡೇವಿಡ್ ಮಿಲ್ಲರ್ 35, ಏಡಮ್ ಮರ್ಕರಂ 25; ಕುಲದೀಪ್ ಯಾದವ್ 17ಕ್ಕೆ 5, ರವೀಂದ್ರ ಜಡೇಜಾ 25ಕ್ಕೆ 2)
ಫಲಿತಾಂಶ: ಭಾರತಕ್ಕೆ 105 ರನ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.