ಲಂಡನ್: ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನೈದು ವಿಕೆಟ್ ಗಳಿಸಿದ್ದರೆ ಶೇನ್ ವಾರ್ನ್ ಅವರ ದಾಖಲೆಯನ್ನು ಹಿಂದಿಕ್ಕಬಹುದಿತ್ತು.
ಆದರೆ ದಾಖಲೆಗಳ ಬಗ್ಗೆ ಎಂದಿಗೂ ಯೋಚಿಸದೇ ಆಟವನ್ನು ಆಸ್ವಾದಿಸಿದ ವೇಗಿ ಜಿಮ್ಮಿ ತಮಗೆ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ಶುಕ್ರವಾರ ವಿದಾಯ ಹೇಳಿದರು. 21 ವರ್ಷಗಳ ಹಿಂದೆ ತಾವು ಪದಾರ್ಪಣೆ ಮಾಡಿದ್ದ ಲಾರ್ಡ್ಸ್ ಅಂಗಳದಲ್ಲಿಯೇ ಕೊನೆಯ ಪಂದ್ಯವನ್ನು ಆಡುವುದು ಅವರ ಆಸೆಯಾಗಿತ್ತು. ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಇನಿಂಗ್ಸ್ ಮತ್ತು 114 ರನ್‌ಗಳಿಂದ ಜಯಿಸಿದ ಇಂಗ್ಲೆಂಡ್ ತಂಡವು ತನ್ನ ‘ಹಿರಿಯಣ್ಣ’ನಿಗೆ ಅವಿಸ್ಮರಣೀಯ ಕಾಣಿಕೆ ನೀಡಿತು.
ಈ ಪಂದ್ಯದಲ್ಲಿಯೂ ಜಿಮ್ಮಿ (ಮೊದಲ ಇನಿಂಗ್ಸ್: 10.4–3–26–1. ಎರಡನೇ ಇನಿಂಗ್ಸ್: 16–7–32–3) ಒಟ್ಟು ನಾಲ್ಕು ವಿಕೆಟ್ ಗಳಿಸಿದರು. ಇದರೊಂದಿಗೆ ಒಟ್ಟು 704 ವಿಕೆಟ್‌ಗಳು ಅವರ ಖಾತೆಯಲ್ಲಿ ಸೇರಿದವು. 700ರ ಗಡಿ ದಾಟಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆ ಅವರದ್ದು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಮೂರನೇ ಸ್ಥಾನದಲ್ಲಿದ್ಧಾರೆ.
ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (800) ಹಾಗೂ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್ (708) ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿದ್ಧಾರೆ.
ವೇಗದ ಬೌಲರ್‌ಗಳಿಗೆ ಇಷ್ಟು ಸುದೀರ್ಘ ಫಿಟ್‌ನೆಸ್ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಜಿಮ್ಮಿ ಈ ಅಪರೂಪದ ಸಾಧನೆ ಮಾಡಿ ತೋರಿದ್ದಾರೆ.
‘ಇಂಗ್ಲೆಂಡ್ ತಂಡದಲ್ಲಿ ಆಡುವುದು ವಿಶ್ವದಲ್ಲಿಯೇ ಶ್ರೇಷ್ಠವಾದ ಕೆಲಸ. ಅಂತಹ ತಂಡದಲ್ಲಿ ದೀರ್ಘ ಅವಧಿಯವರೆಗೆ ಆಡಿದ್ದು ನನ್ನ ಸೌಭಾಗ್ಯ. ಈ ವಾರ ನಾನು ಸುಮಾರು 55 ಓವರ್‌ಗಳನ್ನು ಬೌಲಿಂಗ್ ಮಾಡಿದ್ಧೇನೆ’ ಎಂದು ಪಂದ್ಯದ ನಂತರ ಆ್ಯಂಡರ್ಸನ್ ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಹೇಳಿದರು.
ವಿಂಡೀಸ್ ಎದುರಿನ ಪಂದ್ಯದ ಮೂರನೇ ದಿನದಾಟದ ಆರಂಭವಾದಾಗ ಜಿಮ್ಮಿ ಅವರು ಕ್ರೀಡಾಂಗಣಕ್ಕೆ ಪ್ರವೇಶಿಸುವಾಗ ಉಭಯ ತಂಡಗಳ ಆಟಗಾರರು ಗೌರವ ರಕ್ಷೆ ನೀಡಿದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇದೆಲ್ಲವನ್ನೂ ಕಣ್ತುಂಬಿಕೊಂಡ ಜಿಮ್ಮಿ ತುಸು ಭಾವುಕರಾದಂತೆ ಕಂಡರು.
ಹೇ ಜಿಮ್ಮಿ. 22 ವರ್ಷಗಳ ಸ್ಪೆಲ್‌ನಲ್ಲಿ ನಿಮ್ಮ ಸೊಗಸಾದ ಬೌಲಿಂಗ್ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಬೌಲ್ಡ್ ಮಾಡಿದ್ದೀರಿ. ನಿಮ್ಮ ಬೌಲಿಂಗ್ ನೋಡುವುದೇ ಆನಂಧ। ನಿಮ್ಮ ವೇಗ ನಿಖರತೆ ಸ್ವಿಂಗ್ ಮತ್ತು ಫಿಟ್‌ನೆಸ್ ಅದ್ಭುತ.ಸಚಿನ್ ತೆಂಡೂಲ್ಕರ್ ಭಾರತದ ಕ್ರಿಕೆಟ್ ದಿಗ್ಗಜ
ಅಟ್ಕಿನ್ಸನ್‌ಗೆ ಐದು ವಿಕೆಟ್: ಇಂಗ್ಲೆಂಡ್ ಜಯಭೇರಿ
ಲಂಡನ್: ಗಸ್ ಅಟ್ಕಿನ್ಸನ್ (61ಕ್ಕೆ5) ಸ್ವಿಂಗ್ ದಾಳಿಯ ಮುಂದೆ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಪರಾಭವಗೊಂಡಿತು. ಪಂದ್ಯದ ಮೂರನೇ ದಿನದಾಟದಲ್ಲಿಯೇ ವಿಂಡೀಸ್ ತಂಡವು ದೂಳೀಪಟವಾಯಿತು. ಆತಿಥೇಯ ಇಂಗ್ಲೆಂಡ್ ಇನಿಂಗ್ಸ್ ಮತ್ತು 114 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1–0 ಮುನ್ನಡೆ ಸಾಧಿಸಿತು. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ 121 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಇಂಗ್ಲೆಂಡ್ 371 ರನ್ ಪೇರಿಸಿತ್ತು. ಅದರೊಂದಿಗೆ 250 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದನ್ನು ಮೀರುವ ಹಾದಿಯಲ್ಲಿ ವಿಂಡೀಸ್ ಎಡವಿತು. ಅಟ್ಕಿನ್ಸನ್ ಮತ್ತು ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಜಿಮ್ಮಿ ಆ್ಯಂಡರ್ಸನ್ (32ಕ್ಕೆ3) ಅವರ ಬೌಲಿಂಗ್ ಮುಂದೆ ಕುಸಿಯಿತು. 47 ಓವರ್‌ಗಳಲ್ಲಿ 136 ರನ್ ಗಳಿಸಿ ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್:41.4 ಓವರ್‌ಗಳಲ್ಲಿ 121. ಇಂಗ್ಲೆಂಡ್: 90 ಓವರ್‌ಗಳಲ್ಲಿ 371. ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 47 ಓವರ್‌ಗಳಲ್ಲಿ 136 (ಅಲಿಕ್ ಅಥಾಂಜೆ 22 ಜೇಸನ್ ಹೋಲ್ಡರ್ 20 ಗುಡಕೇಶ್ ಮೋತಿ ಔಟಾಗದೆ 31 ಜೇಮ್ಸ್ ಆ್ಯಂಡರ್ಸನ್ 32ಕ್ಕೆ3 ಗಸ್ ಅಟ್ಕಿನ್ಸನ್ 61ಕ್ಕೆ5 ಬೆನ್ ಸ್ಟೋಕ್ಸ್ 25ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್ ಹಾಗೂ 114 ರನ್‌ಗಳ ಜಯ. ಸರಣಿಯಲ್ಲಿ ಇಂಗ್ಲೆಂಡ್ ಗೆ 1–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.