ನಾಗಪುರ: ಭಾರತದಲ್ಲಿ ಸರಣಿ ಜಯಿಸುವುದು ಆ್ಯಷಸ್ ಟ್ರೋಫಿ ಗೆಲುವಿಗಿಂತಲೂ ದೊಡ್ಡದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಆಟಗಾರರು ಹೇಳಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆಯಲಿರುವ ಬಾರ್ಡರ್ –ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ತಂಡದ ಅಟಗಾರರು ಕ್ರಿಕೆಟ್ ಡಾಟ್ ಕಾಮ್ ಎಯು ಡಾಟ್ ಆನ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ವಿಡಿಯೊದಲ್ಲಿ ಮಾತನಾಡಿದ್ದಾರೆ. ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಭಾರತದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದೇ ಕಷ್ಟ. ಅದರಲ್ಲೂ ಇಡೀ ಸರಣಿ ಜಯಿಸುವುದು ಇನ್ನೂ ದೊಡ್ಡ ಸವಾಲು. ನಾವು ಗೆದ್ದರೆ ಅದೊಂದು ಬಹಳ ದೊಡ್ಡ ಸಾಧನೆಯೇ ಆಗಲಿದೆ. ಆ್ಯಷಸ್ ಸರಣಿ ಜಯಕ್ಕಿಂತಲೂ ಬೃಹತ್ ಸಾಧನೆಯಾಗುವುದು’ ಎಂದು ಸ್ಮಿತ್ ಹೇಳಿದ್ಧಾರೆ.
‘ನಾನು ಹೋದ ಆ್ಯಷಸ್ ಸರಣಿಯಲ್ಲಿ ಆಡಿದ್ದು ಒಳ್ಳೆಯ ಅನುಭವ. ಆದರೆ, ಭಾರತದಲ್ಲಿ ಟೆಸ್ಟ್ ಆಡುವುದು ಮತ್ತು ಗೆಲ್ಲುವುದು ಕಠಿಣ ಸವಾಲು. ವಿಶ್ವದ ಅತ್ಯಂತ ಶ್ರೇಷ್ಠ ಸ್ಪಿನ್ನರ್‌ಗಳನ್ನು ಎದುರಿಸುವುದು ಕಷ್ಟಕರ’ ಎಂದು ಡೇವಿಡ್ ವಾರ್ನರ್ ಹೇಳಿದ್ದಾರೆ.
‘ಭಾರತದಲ್ಲಿ ಗೆಲುವು ಸಾಧಿಸುವುದು ವಿಶೇಷ ಸಾಧನೆಯಾಗಲಿದ್ದು ಅದು ಆಸ್ಟ್ರೇಲಿಯಾದ ಕೀರ್ತಿ ಕಿರೀಟಕ್ಕೆ ಅನರ್ಘ್ಯ ರತ್ನವಾಗುತ್ತದೆ. ಭಾರತದಲ್ಲಿರುವ ವಿಭಿನ್ನ ವಾತಾವರಣಕ್ಕೆ ಹೊಂದಿಕೊಂಡು ಆಡುವುದು ಬಹಳ ಕಷ್ಟ. ಆ ವಾತಾವರಣ ಮತ್ತು ಸವಾಲುಗಳೇ ಭಾರತೀಯ ಆಟಗಾರರನ್ನು ಶಕ್ತಿಯುತ ಮಾಡಿವೆ’ ಎಂದು ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ. ಅವರು ಗಾಯಗೊಂಡಿರುವುದರಿಂದ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ.
ಇವನ್ನೂ ಓದಿ
* ರಿಷಭ್ ಇದಿದ್ದರೆ ಆಸ್ಟ್ರೇಲಿಯಾ ಆಟಗಾರರಿಗೆ ನಿದ್ದೆಯೇ ಬರುತ್ತಿರಲಿಲ್ಲ: ಚಾಪೆಲ್
* ಭಾರತದಲ್ಲಿ ಜಯಿಸುವುದು ಆ್ಯಷಸ್ ಗೆಲುವಿಗಿಂತ ಶ್ರೇಷ್ಠ: ಪ್ಯಾಟ್ ಕಮಿನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.