ADVERTISEMENT

ಸ್ಪಾಟ್‌ ಫಿಕ್ಸಿಂಗ್ ಹಗರಣದ ಬಗ್ಗೆ ರಜಾಕ್‌– ಏಟಿನ ನಂತರ ಬಾಯಿಬಿಟ್ಟ ಅಮೀರ್‌.....

ಪಿಟಿಐ
Published 12 ಜೂನ್ 2019, 16:22 IST
Last Updated 12 ಜೂನ್ 2019, 16:22 IST
ಅಬ್ದುಲ್‌ ರಜಾಕ್‌
ಅಬ್ದುಲ್‌ ರಜಾಕ್‌   

ಕರಾಚಿ: ‘ಮೊಹಮದ್‌ ಆಮೀರ್‌ ಅವರಿಗೆ ಆಗಿನ ಪಾಕಿಸ್ತಾನ ಏಕದಿನ ತಂಡದ ನಾಯಕ ಅಫ್ರೀದಿ ಕಪಾಳಕ್ಕೆ ಹೊಡೆದ ನಂತರವಷ್ಟೇ ಅವರು ‘ಸ್ಪಾಟ್‌ ಫಿಕ್ಸಿಂಗ್‌’ ಬಗ್ಗೆ ಬಾಯಿಬಿಟ್ಟಿದ್ದರು. ಆದರೆ ಸಲ್ಮಾನ್‌ ಬಟ್‌, ಪಾಕಿಸ್ತಾನದ ಆ ವಿವಾದಿತ ಇಂಗ್ಲೆಂಡ್‌ ಪ್ರವಾಸಕ್ಕಿಂತ ಸಾಕಷ್ಟು ಮೊದಲೇ ಈ ಅಕ್ರಮದಲ್ಲಿ ಭಾಗಿಯಾಗಿದ್ದರು’ ಎಂದು ಮಾಜಿ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ಹೇಳಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್ ಹಗರಣ ಪಾಕಿಸ್ತಾನ ಕ್ರಿಕೆಟ್‌ಗೆ ಮಸಿಬಳಿದಿತ್ತು. ಜಿಎನ್‌ಎಸ್‌ ಸುದ್ದಿವಾಹಿನಿ ಜೊತೆ ಮಾತನಾಡುವಾಗ ಅಮೀರ್‌ ಪ್ರಕರಣದ ಬಗ್ಗೆ ಅವರು ಪ್ರಸ್ತಾಪಿಸಿದರು.

‘ಆತ (ಅಫ್ರೀದಿ) ಕೊಠಡಿಯಿಂದ ಹೊರಹೋಗುವಂತೆ ನನಗೆ ಹೇಳಿದ. ಕೆಲವೇ ಕ್ಷಣಗಳ ನಂತರ ಕೆನ್ನೆಗೆ ಹೊಡೆದ ಸದ್ದು ಕೇಳಿಸಿತು. ನಂತರ ಅಮೀರ್‌ ಸತ್ಯವನ್ನು ಬಿಚ್ಚಿಟ್ಟರು’ ಎಂದು 39 ವರ್ಷದ ರಜಾಕ್‌ ಹೇಳಿದರು.

ADVERTISEMENT

‘ಪಾಕಿಸ್ತಾನ ಕ್ರಿಕೆಟ್‌ಗೆ ಕಳಂಕ ತಂದ ಈ ಘಟನೆಗೆ ಪಿಸಿಬಿ ಕೂಡ ಕಾರಣ. ಅದು ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ. ಐಸಿಸಿ ಎದುರು ತನ್ನ ಕ್ಷಮತೆಪ್ರದರ್ಶನ ಮಾಡುವ ಬದಲು, ತಾನೇ ನೇರವಾಗಿ ಮೂವರು ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಅವರ ಮೇಲೆ ಒಂದೆರಡು ವರ್ಷ ನಿಷೇಧ ಹೇರಬಹುದಿತ್ತು. ಹಾಗೆ ಮಾಡದ ಕಾರಣ ಪಿಸಿಬಿ ಮಾನ ಹರಾಜಾಯಿತು’ ಎಂದರು.

‘ಇಂಗ್ಲೆಂಡ್‌ನಲ್ಲಿ ಈ ಹಗರಣ ಬೆಳಕಿಗೆ ಬರುವ ಮೊದಲೇ ಬಟ್‌ ಉದ್ದೇಶಪೂರ್ವಕವಾಗಿ ವಿಕೆಟ್‌ ನೀಡುತ್ತಿದ್ದರು ಮತ್ತು ಬೇಕೆಂತಲೇ ಡಾಟ್‌ ಬಾಲ್‌ಗಳನ್ನು ಆಡುತ್ತಿದ್ದರು’ ಎಂದರು. ‘ನಾನು ನನ್ನ ಆತಂಕವನ್ನು ಶಹೀದ್‌ ಆಫ್ರೀದಿ ಜೊತೆ ಹಂಚಿಕೊಂಡಿದ್ದೆ. ಆದರೆ ಅವರು ಇದು ನಿನ್ನ ಭ್ರಮೆ. ಅಂಥದ್ದೇನೂ ಇಲ್ಲವೆಂದರು. ಆದರೆ ವೆಸ್ಟ್‌ ಇಂಡೀಸ್‌ನಲ್ಲಿ ಟಿ–20 ಪಂದ್ಯದ ವೇಳೆ ಬಟ್‌ತಂಡದ ಹಿತರಕ್ಷಣೆಗೆ ಮುಂದಾಗದಿರುವುದು ನನಗೆ ಮನವರಿಕೆಯಾಯಿತು’ ಎಂದು ರಜಾಕ್‌ ಹೇಳಿದರು.

‘ಬಟ್‌ ಜೊತೆ ಆಡುವಾಗ ಒಂದು ರನ್‌ಗೆ ಓಡುವಂತೆ ಕೇಳಿದೆ. ಆದರೆ ಅವರು ಕಿವಿಗೊಡಲಿಲ್ಲ’ ಎಂದು ನೆನಪಿಸಿಕೊಂಡ ಅವರು, ‘ರನ್‌ ಬೇಡವೆನ್ನುವ ಅವರ ಈ ತಂತ್ರದಿಂದ ನನಗೆ ಆಚ್ಚರಿಯಾಯಿತು. ನನಗೂ ಆಡಲು ಬಿಡುವಂತೆ ಕೇಳಿದೆ. ಅವರು ಎರಡು– ಮೂರು ಎಸೆತಗಳಲ್ಲಿ ರನ್‌ ಗಳಿಸದೇ ನಂತರವಷ್ಟೇ ನನಗೆ ಸ್ಟ್ರೈಕ್‌ ನೀಡುತ್ತಿದ್ದರು. ಇದರಿಂದ ನಿರಾಸೆ ಉಂಟಾಗುತಿತ್ತು. ಒತ್ತಡ ಹೆಚ್ಚಿ ಔಟಾಗಬೇಕಾಗುತಿತ್ತು’ ಎಂದರು.

ಸಲ್ಮಾನ್‌ ಬಟ್‌, ಮೊಹಮದ್ ಅಮೀರ್‌ ಜೊತೆ ಮೊಹಮದ್‌ ಆಸಿಫ್‌ ಅವರನ್ನು 2010ರ ಸೆಪ್ಟೆಂಬರ್‌ನಲ್ಲಿ ಮೊದಲು ಅಮಾನತು ಮಾಡಲಾಗಿತ್ತು. ನಂತರ ಐಸಿಸಿಯ ಭ್ರಷ್ಟಾಚಾರ ತಡೆ ನ್ಯಾಯಮಂಡಳಿ ಐದು ವರ್ಷಗಳ ಅವಧಿಗೆ (2011ರ ಆರಂಭದಿಂದ) ನಿಷೇಧ ಹೇರಿತ್ತು.

ಈಗ ಮೂವರೂ ಕ್ರಿಕೆಟ್‌ಗೆ ಮರಳಿದ್ದಾರೆ. ಆದರೆ ವಿಶ್ವಕಪ್‌ಗೆ ಮೊಹಮದ್‌ ಅಮೀರ್‌ ಮಾತ್ರ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.