ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋತ ನಂತರ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಿರಿಯ ಆಟಗಾರರ ವಾಗ್ದಾಳಿಗೆ ಗುರಿಯಾಗಿದ್ದಾರೆ. ‘ಅವರ ಬೌಲಿಂಗ್ ಮತ್ತು ಇದುವರೆಗಿನ ನಾಯಕತ್ವ ಎರಡೂ ಸಾಧಾರಣ ಮಟ್ಟದ್ದಾಗಿತ್ತು’ ಎಂದು ಮಾಜಿ ನಾಯಕ ಸುನಿಲ್ ಗಾವಸ್ಕರ್ ಟೀಕಿಸಿದ್ದಾರೆ.
ಚೆನ್ನೈ ಎದುರು ಭಾನುವಾರ ಎದುರಾದ ಸೋಲು ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈಗೆ ನಾಲ್ಕನೇಯದ್ದಾಗಿದೆ. ಪಾಂಡ್ಯ ಅವರ ಅಂತಿಮ ಓವರ್‌ನಲ್ಲಿ 26 ರನ್‌ಗಳು ಬಂದಿದ್ದು ಚೆನ್ನೈನ ದಿಗ್ಗಜ ಎಂ.ಎಸ್.ಧೋನಿ ಒಬ್ಬರೇ ಮೂರು ಸಿಕ್ಸರ್ ಸಹಿತ 20 ರನ್ ಗಳಿಸಿದ್ದರು. ಅಂತಿಮವಾಗಿ ಇದು ನಿರ್ಣಾಯಕವಾಯಿತು.
ಮುಂಬೈ ನಾಯಕತ್ವ ವಹಿಸಿಕೊಂಡ ನಂತರ ಪಾಂಡ್ಯ ಪ್ರೇಕ್ಷಕರಿಂದ ಮೂದಲಿಕೆಗೆ ಒಳಗಾಗಿದ್ದರು. ಭಾನುವಾರ ಅವರ ನಿರ್ವಹಣೆಗೆ ಗಾವಸ್ಕರ್ ಜೊತೆ ಇಂಗ್ಲೆಂಡ್‌ನ ಮಾಜಿ ಕ್ಯಾಪ್ಟನ್ ಕೆವಿನ್ ಪೀಟರ್‌ಸನ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇದು ಸಾಧಾರಣ ಬೌಲಿಂಗ್, ಸಾಧಾರಣ ನಾಯಕತ್ವ. ಶಿವಂ ದುಬೆ ಜೊತೆ ಗಾಯಕವಾಡ್ ಅವರ ಸೊಗಸಾದ ಆಟದ ಹೊರತಾಗಿಯೂ ಚೆನ್ನೈ ತಂಡವನ್ನು 185–190 ರನ್‌ಗಳಿಗೆ ಸೀಮಿತಗೊಳಿಸಬೇಕಿತ್ತು’ ಎಂದಿದ್ದಾರೆ ಗಾವಸ್ಕರ್.
‘ಇತ್ತೀಚಿನ ವರ್ಷಗಳಲ್ಲೇ ನಾನು ನೋಡಿದ ಅತ್ಯಂತ ಕೆಟ್ಟ ರೀತಿಯ ಬೌಲಿಂಗ್ ಇದು’ ಎಂದಿದ್ದಾರೆ ಅವರು.
3 ಓವರುಗಳಲ್ಲಿ 42 ರನ್ ತೆತ್ತ ಪಾಂಡ್ಯ, ಬ್ಯಾಟಿಂಗ್‌ನಲ್ಲೂ ವಿಫಲರಾಗಿದ್ದರು.
ಹೊರಗಿನ ಟೀಕೆಗಳು ಪಾಂಡ್ಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮುಂಬೈನ ಬ್ಯಾಟಿಂಗ್ ಕೋಚ್ ಕೀರನ್ ಪೊಲ್ಲಾರ್ಡ್ ಅವರು, ‘ತಂಡದ ಸೋಲಿಗೆ ಕೆಲವರನ್ನೇ ಹೊಣೆ ಮಾಡುವ ಪ್ರವೃತ್ತಿಯಿಂದ ಬೇಸತ್ತು ಹೋಗಿದ್ದೇನೆ’ ಎಂದು ಹೇಳಿದ್ದಾರೆ. ಎಲ್ಲ ಹಿನ್ನಡೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಗುರಿಮಾಡಬೇಡಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಸೋಲಿಗೆ ಹೊಣೆ ಮಾಡಲಾಗುತ್ತಿದೆ. ಕ್ರಿಕೆಟ್ ತಂಡ ಆಟ’ ಎಂದು ಪೊಲ್ಲಾರ್ಡ್ ಭಾನುವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.