ADVERTISEMENT

ACC U19 Asia Cup 2023: ಪಾಕ್ ಗೆಲುವಿಗೆ 260 ರನ್ ಗುರಿ ಒಡ್ಡಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2023, 10:06 IST
Last Updated 10 ಡಿಸೆಂಬರ್ 2023, 10:06 IST
<div class="paragraphs"><p>ಚಿತ್ರ ಕೃಪೆ: X/@ACCMedia1</p></div>

ಚಿತ್ರ ಕೃಪೆ: X/@ACCMedia1

   

ದುಬೈ: ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ.

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ 'ಎ' ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

ADVERTISEMENT

ಭಾರತದ ಕಿರಿಯರ ತಂಡದ ಪರ ಆಕರ್ಷಕ ಅರ್ಧಶತಕಗಳನ್ನು ಗಳಿಸಿದ ಆದರ್ಶ್ ಸಿಂಗ್ (62), ನಾಯಕ ಉದಯ್ ಸಹಾರನ್ (60) ಹಾಗೂ ಸಚಿನ್ ಧಾಸ್(58) ಸವಾಲಿನ ಮೊತ್ತ ಪೇರಿಸಲು ನೆರವಾದರು. ಅರ್ಷಿನ್ ಕುಲಕರ್ಣಿ 24 ರನ್ ಗಳಿಸಿದರು.

ರುದ್ರ ಪಟೇಲ್ (1), ಮುಶೀರ್ ಖಾನ್ (2) ಬ್ಯಾಟಿಂಗ್ ವೈಫಲ್ಯ ಕಂಡರು. ಕೆಳ ಕ್ರಮಾಂಕದಲ್ಲಿ ಕೇವಲ 42 ಎಸೆತಗಳಲ್ಲಿ 58 ರನ್ ಗಳಿಸಿದ (3 ಸಿಕ್ಸರ್, 2 ಬೌಂಡರಿ) ಸಚಿನ್ ಧಾಸ್ ಭಾರತಕ್ಕೆ ಆಸರೆಯಾದರು.

ಪಾಕಿಸ್ತಾನದ ಪರ ಮೊಹಮ್ಮದ್ ಜೀಶಾನ್ ನಾಲ್ಕು ವಿಕೆಟ್ ಗಳಿಸಿದರು.

ಭಾರತದ ಕಿರಿಯರ ತಂಡವು ಅಫ್ಗಾನಿಸ್ತಾನ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಜಯ ಗಳಿಸಿತ್ತು. ಡಿಸೆಂಬರ್ 12ರಂದು ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ತಂಡದ ಸವಾಲನ್ನು ಎದುರಿಸಲಿದೆ.

ಯುಎಇನಲ್ಲಿ ಏಕದಿನ ಮಾದರಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ಗುಂಪಿನ ತಲಾ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

ಡಿಸೆಂಬರ್ 15ರಂದು ಸೆಮಿಫೈನಲ್ ಪಂದ್ಯಗಳು ಮತ್ತು ಡಿ.17ರಂದು ಫೈನಲ್ ಪಂದ್ಯ ನಡೆಯಲಿದೆ. ಕಿರಿಯರ ವಿಶ್ವಕಪ್‌ನಲ್ಲಿ ಭಾರತ ಒಟ್ಟು ಎಂಟು ಬಾರಿ ಪ್ರಶಸ್ತಿ ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.