ಕೊಲಂಬೊ:ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ, ಜಾರ್ಜ್ ಫ್ಲಾಯ್ಡ್ ಅವರು ಕಳೆದವಾರಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿರುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಕ್ಕಾರ, ಈ ಹೋರಾಟವು ನಮ್ಮೆಲ್ಲರಿಗೂ ಪಾಠವಾಗಬೇಕು ಎಂದು ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಸರಣಿ ಟ್ವೀಟ್ ಮಾಡಿರುವಅವರು,‘ವ್ಯವಸ್ಥಿತ ವರ್ಣಭೇದ ನೀತಿ ಮತ್ತು ಅನ್ಯಾಯದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ನಮ್ಮೆಲ್ಲರಿಗೂ ಪ್ರಬಲವಾದ ಪಾಠವಾಗಿದೆ.ನಾವು ಯಾವ ದೇಶದಲ್ಲಿ ವಾಸಿಸುತ್ತಿದ್ದೇವೋ, ಅದು ಅಮೆರಿಕ, ಶ್ರೀಲಂಕಾ ಅಥವಾ ಇನ್ಯಾವುದೇ ಆಗಿರಲಿ. ನಮ್ಮ ಸಂವೇಧನೆಗಳು ಮತ್ತು ಸೂಕ್ಷ್ಮತೆಗಳನ್ನು ನಿರ್ಧರಿಸುವುದು ರಾಜ್ಯವಲ್ಲ.ಅದು ನಿಮ್ಮ ಆಯ್ಕೆ ಮತ್ತು ನನ್ನದೂ’ ಎಂದಿದ್ದಾರೆ. ಮುಂದುವರಿದು, ಅಜ್ಞಾನ ಮತ್ತು ಪೂರ್ವಾಗ್ರಹಕ್ಕೆ ಅವಕಾಶವಿಲ್ಲದ ಸಂಸ್ಕೃತಿಯನ್ನು ಸೃಷ್ಟಿಸಲು ಕರೆ ನೀಡಿದ್ದಾರೆ.
‘ನಾವು, ಸಾಮಾನ್ಯ ಪ್ರಜೆಗಳು ಒಂದಾಗಿಮುಕ್ತ, ಗೌರವಯುತ ಮತ್ತು ತಿಳುವಳಿಕೆಯುಳ್ಳ ವಿಶ್ವ ಸಂಸ್ಕೃತಿಯನ್ನು ನಿರ್ಮಿಸುವ ಮೂಲಕಅಸಾಧಾರಣ ಬದಲಾವಣೆಯನ್ನು ಸಾಧಿಸಬಹುದು. ವಿಶ್ವ ಸಂಸ್ಕೃತಿ ಎಂದರೆ, ಅಜ್ಞಾನ ಮತ್ತು ಪೂರ್ವಾಗ್ರಹಕ್ಕೆ ಅವಕಾಶವಿಲ್ಲದ ಮತ್ತು ನಿಜವಾದ ಸ್ವಾತಂತ್ರ್ಯ ಇರುವಂತಹದ್ದಾಗಿದೆ’ಎಂದು ತಿಳಿಸಿದ್ದಾರೆ.
‘ಸರ್ಕಾರವು ನಮ್ಮ ಬುದ್ದಿವಂತಿಕೆ, ಸಹಾನುಭೂತಿ, ಪರಾನುಭೂತಿ ಮತ್ತು ತಿಳುವಳಿಕೆಯನ್ನು ನಿರ್ಧರಿಸಬಾರದು. ನಮ್ಮ ಹೃದಯ ಮತ್ತು ಮನಸ್ಸಿನ ಮುಕ್ತತೆಯನ್ನು ಇತರರಿಗೆ ಸೀಮಿತಗೊಳಿಸಬಾರದು ಅಥವಾ ಬೇರೆಯವರೊಂದಿಗಿನ ಭಿನ್ನತೆಗಳನ್ನು ಸ್ವೀಕರಿಸುವ ಮತ್ತು ಮೌಲ್ಯೀಕರಿಸುವ ನಮ್ಮ ಸಾಮರ್ಥ್ಯವನ್ನು ಸೀಮಿತಗೊಳಿಸಬಾರದು’ ಎಂದೂ ಹೇಳಿದ್ದಾರೆ.
‘ರಾಜಕೀಯ ನಾಯಕತ್ವವು ಸಮಾಜದ ಪ್ರತಿಬಿಂಬವೇ ಹೊರತು ಬೇರೇನು ಅಲ್ಲ. ಅದಕ್ಕಾಗಿ ಉತ್ತಮರು ತಮ್ಮ ಪಾತ್ರಗಳನ್ನು ನಿಭಾಯಿಸಬೇಕು. ಸಾಮಾನ್ಯ ನಾಗರಿಕರು ಉತ್ತಮರಾಗಿ ರೂಪುಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.
‘ನಾವೂ ನಮ್ಮಂತಹವರೇ ಆದ ಪ್ರತಿನಿಧಿಗಳನ್ನು ಆರಿಸುತ್ತೇವೆ. ಅವರು ಸರ್ಕಾರದ ಪ್ರತಿ ನಿರ್ಧಾರಗಳಿಗೂ ಜವಾಬ್ದಾರರಾಗಿರುತ್ತಾರೆ. ನಾವು ಅವರು ಏನಾಗಲಿದ್ದಾರೋ ಅದಕ್ಕೆ ಜವಾಬ್ದಾರರಾಗಿರಲಿದ್ದೇವೆ. ಅವರ ಸ್ವಭಾವವನ್ನು ನಮ್ಮ ಪ್ರಭಾವ ಮತ್ತು ವರ್ತನೆಗಳು ನಿರ್ಧರಿಸುತ್ತವೆ’ ಎಂದು ತಿಳಿಸಿದ್ದಾರೆ.
‘ನಮ್ಮ ಆಯ್ಕೆಗಳು ಸರ್ಕಾರದ ನಡೆ, ಕಾರ್ಯವಿಧಾನ, ನೀತಿ ಮತ್ತು ಶಾಸನಗಳಿಗೆ ಮಾರ್ಗದರ್ಶನ ನೀಡುತ್ತವೆ. ಉತ್ತಮ ಸರ್ಕಾರ ಮತ್ತು ನ್ಯಾಯಯುತ ಆಡಳಿತವನ್ನು ಸ್ಥಾಪಿಸಲು ನಾವೂ ಉತ್ತಮರಾಗಿರಬೇಕು.ನಮ್ಮ ಸಾಮರ್ಥ್ಯ ಮತ್ತು ನಮ್ಮ ದೌರ್ಬಲ್ಯಗಳು ಚುನಾಯಿತ ಪ್ರತಿನಿಧಿಗಳ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗಿವೆ’ ಎಂದು ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ವೆಸ್ಟ್‌ಇಂಡೀಸ್ ಕ್ರಿಕೆಟಿಗರಾದ ಡರೇನ್ ಸಾಮಿ, ಕ್ರಿಸ್ ಗೇಲ್ ಅವರೂ ವರ್ಣಭೇದ ನೀತಿಯನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.