ADVERTISEMENT

ಸೋತರೂ ಮನಗೆದ್ದ ಅಫ್ಗಾನಿಸ್ತಾನ...

ಪ್ರಮೋದ ಜಿ.ಕೆ
Published 7 ಜುಲೈ 2019, 19:30 IST
Last Updated 7 ಜುಲೈ 2019, 19:30 IST
ಮೊಹಮ್ಮದ್‌ ನಬಿ
ಮೊಹಮ್ಮದ್‌ ನಬಿ   

ಸೌತಾಂಪ್ಟನ್‌ನಲ್ಲಿ ಭಾರತದ ಎದುರು ನಡೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಪಂದ್ಯವದು. ಭಾರತದ ಸಾಮರ್ಥ್ಯಕ್ಕೆ ಸಮಶಕ್ತಿ ಹೊಂದಿಲ್ಲದ ಅಫ್ಗಾನಿಸ್ತಾನ 2011ರ ವಿಶ್ವ ಚಾಂಪಿಯನ್ನರಿಗೆ ಸುಲಭವಾಗಿ ಶರಣಾಗಬಹುದು ಎನ್ನುವ ನಿರೀಕ್ಷೆ ಬಹಳಷ್ಟು ಕ್ರಿಕೆಟ್‌ ಪ್ರೇಮಿಗಳದ್ದಾಗಿತ್ತು. ಮೊಹಮ್ಮದ್‌ ಶಮಿ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಉರುಳಿಸದೇ ಹೋಗಿದ್ದರೆ ಪ್ರಾಯಶಃ ಭಾರತವೇ ‘ಕ್ರಿಕೆಟ್ ಲಿಲ್ಲಿಪುಟ್‌’ ಎದುರು ಮಂಡಿ ಊರಬೇಕಾಗುತ್ತಿತ್ತು.

ಅಫ್ಗಾನಿಸ್ತಾನ ತಂಡ ಹಿಂದೆಯೂ ಇಂಥ ಅನೇಕ ಅಚ್ಚರಿಯ ಫಲಿತಾಂಶಗಳನ್ನು ನೀಡಿದೆ. 2015ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿದ್ದನ್ನು ಕ್ರಿಕೆಟ್‌ ಪ್ರೇಮಿಗಳು ಮರೆತಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಸೋತಿದೆ ನಿಜ. ಆದರೆ ಪ್ರತಿ ಪಂದ್ಯದಲ್ಲಿ ನೀಡಿದ ಪ್ರದರ್ಶನ ವಿಶ್ವದ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿದೆ. ಅದರಲ್ಲೂ ಈ ತಂಡದ ಸ್ಪಿನ್‌ ಮೋಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಬ್ಬೆರಗಾಗಿಸಿದೆ.

2019ರ ವಿಶ್ವಕಪ್‌ ಟೂರ್ನಿಗೆ ಅಫ್ಗಾನಿಸ್ತಾನ ತಂಡ ಆಡಲು ಅರ್ಹತೆ ಗಳಿಸಿದ್ದು ದೊಡ್ಡ ಸಾಧನೆ. ಏಕೆಂದರೆ ಈ ತಂಡ ಹೋದ ವರ್ಷ ನಡೆದ ಅರ್ಹತಾ ಟೂರ್ನಿಯಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿತ್ತು. ಆರಂಭದ ಮೂರೂ ಪಂದ್ಯಗಳಲ್ಲಿ ಸೋತು ಅರ್ಹತಾ ಹಂತದಿಂದಲೇ ಹೊರಬೀಳುವ ಸಂಕಷ್ಟದಲ್ಲಿತ್ತು.

ADVERTISEMENT

ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳವನ್ನು ಮಣಿಸಿ ರನ್‌ರೇಟ್ ಆಧಾರದ ಮೇಲೆ ಸೂಪರ್‌ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆದು ಅಲ್ಲಿ ವೆಸ್ಟ್‌ ಇಂಡೀಸ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಐರ್ಲೆಂಡ್‌ ಎದುರು ಗೆಲುವು ಸಾಧಿಸಿ ಫೈನಲ್‌ ತಲುಪಿತ್ತು. ದೈತ್ಯ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ವೆಸ್ಟ್‌ ಇಂಡೀಸ್ ತಂಡವನ್ನು ಲೀಗ್‌ ಜೊತೆಗೆ ಫೈನಲ್‌ನಲ್ಲಿಯೂ ಮಣಿಸಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದ್ದು ಅಚ್ಚರಿಯ ಸಾಧನೆಯೇ ಸರಿ.

ಆದ್ದರಿಂದ ಅಫ್ಗಾನಿಸ್ತಾನದ ಆಟಗಾರರು ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯದಲ್ಲಿಯೂ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಿದರು. ತಮ್ಮ ದೇಶದಲ್ಲಿ ಸದಾ ಯುದ್ಧ, ಆಂತರಿಕ ಕ್ಷೋಭೆ, ಭಯದ ವಾತಾವರಣ ಮರೆತು ದಿಟ್ಟತನದಿಂದ ಎದುರಿಸಿ ಛಲಕ್ಕೆ ಸವಾಲೆಸೆದರು. ವಿಶ್ವಕಪ್‌ಗೆ ಅಂತಿಮ ತಂಡವನ್ನು ಆಯ್ಕೆ ಮಾಡುವ ಮೊದಲು 23 ಸದಸ್ಯರ ಅಫ್ಗಾನಿಸ್ತಾನ ತಂಡ ದಕ್ಷಿಣ ಆಫ್ರಿಕಕ್ಕೆ ತೆರಳಿ ಆರು ಅಭ್ಯಾಸ ಪಂದ್ಯಗಳನ್ನು ಆಡಿತ್ತು. ಅಲ್ಲಿಂದ ಮತ್ತೆ ಕಾಬೂಲ್‌ಗೆ ಮರಳಿತ್ತು. ನಂತರ 15 ಮಂದಿಯ ತಂಡ ಆಯ್ಕೆ ಮಾಡಲಾಗಿತ್ತು.

ವಿಶ್ವಕಪ್‌ ಟೂರ್ನಿಯ ಪ್ರತಿ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡಕ್ಕೆ ಶಕ್ತಿ ತುಂಬಿದ್ದು ಸ್ಪಿನ್ನರ್‌ಗಳು. ಐಪಿಎಲ್‌, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌, ಪಾಕಿಸ್ತಾನ ಕ್ರಿಕೆಟ್‌ ಲೀಗ್‌ ಹೀಗೆ ಅನೇಕ ಟೂರ್ನಿಗಳಲ್ಲಿ ಆಡಿರುವ ಸ್ಪಿನ್ನರ್‌ ಮೊಹಮ್ಮದ್‌ ನಬಿ ಸ್ಪಿನ್‌ ವಿಭಾಗದ ಶಕ್ತಿಯಾಗಿದ್ದರು. ಈ ಬೌಲರ್‌ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿದ್ದರು. ವಿಶ್ವಕಪ್‌ನಲ್ಲಿ ಅವರು ಒಟ್ಟು ಹತ್ತು ವಿಕೆಟ್‌ಗಳನ್ನು ಉರುಳಿಸಿದರೆ, ಇನ್ನಿತರ ಸ್ಪಿನ್ನರ್‌ಗಳಾದ ಮುಜೀಬ್‌ ಉರ್‌ ರೆಹಮಾನ್‌ ಏಳು, ರಶೀದ್‌ ಖಾನ್‌ ಆರು ವಿಕೆಟ್‌ಗಳನ್ನು ಕಬಳಿಸಿದರು. ವಿಶ್ವಕಪ್‌ನಲ್ಲಿ ಅಫ್ಗಾನ್‌ ತಂಡದ ದಾಳಿ ಆರಂಭವಾಗುತ್ತಿದ್ದುದೇ ಆಫ್‌ ಸ್ಪಿನ್ನರ್‌ ಮುಜೀಬ್‌ ಮೂಲಕ.

ಅಫ್ಗಾನಿಸ್ತಾನ ತಂಡ ಶ್ರೀಲಂಕಾ ಎದುರು ಮಾಡಿದ ಕರಾರುವಾಕ್ಕಾದ ಬೌಲಿಂಗ್ ಮೆಚ್ಚುವಂಥದ್ದು. ಏಷ್ಯಾದ ಬಲಿಷ್ಠ ತಂಡಗಳಲ್ಲಿ ಒಂದಾದ ಲಂಕಾವನ್ನು 201 ರನ್‌ಗಳಿಗೆ ಕಟ್ಟಿ ಹಾಕಿತ್ತು. ಕೊನೆಯ ಲೀಗ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಬ್ಯಾಟಿಂಗ್‌ನಲ್ಲಿಯೂ ಮಿಂಚಿತು. ಕೆರಿಬಿಯನ್‌ ನಾಡಿನ ತಂಡ ನೀಡಿದ್ದ 312 ರನ್‌ಗೆ ಪ್ರತಿಯಾಗಿ 288 ರನ್ ಗಳಿಸಿ ಗೆಲುವಿನ ಸನಿಹ ಬಂದಿದ್ದು ಇದಕ್ಕೆ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.