ADVERTISEMENT

ಸೆಮಿ ಪ್ರವೇಶಿಸಿದ ಅಫ್ಗಾನಿಸ್ತಾನ: ರಶೀದ್ ಖಾನ್ ಪಡೆಯ ಚಾರಿತ್ರಿಕ ಸಾಧನೆ

ಪಿಟಿಐ
Published 25 ಜೂನ್ 2024, 16:51 IST
Last Updated 25 ಜೂನ್ 2024, 16:51 IST
<div class="paragraphs"><p>ಅಫ್ಗಾನಿಸ್ತಾನ ನಾಯಕ ರಶೀದ್ ಖಾನ್ ಸಂಭ್ರಮ&nbsp; </p></div>

ಅಫ್ಗಾನಿಸ್ತಾನ ನಾಯಕ ರಶೀದ್ ಖಾನ್ ಸಂಭ್ರಮ 

   

ಕಿಂಗ್ಸ್‌ಟೌನ್: ರಶೀದ್ ಖಾನ್ ಅವರ ದಿಟ್ಟ ನಾಯಕತ್ವದಲ್ಲಿ ಅಫ್ಗಾನಿಸ್ತಾನ ತಂಡವು ಮೊಟ್ಟಮೊದಲ ಬಾರಿಗೆ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು. 

ಯುದ್ಧ, ಭಯೋತ್ಪಾದನೆ ಮತ್ತು ರಾಜಕೀಯ ದಳ್ಳುರಿಯಲ್ಲಿ ಬೆಂದು ಬಸವಳಿದ ದೇಶದಲ್ಲಿ ಸಂತಸದ ಹೊನಲು ಹರಿಸಿದ ರಶೀದ್ ಬಳಗವು ಚಾರಿತ್ರಿಕ ಸಾಧನೆ ಮಾಡಿತು. ಈ ಹಾದಿಯಲ್ಲಿ ತಂಡವು ಸೂಪರ್ 8ರ ಹಂತದ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

ADVERTISEMENT

ಮಂಗಳವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ನಡೆದ 8ರ ಘಟ್ಟದ ಕೊನೆ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 2021ರ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಆಸೆಯು ಭಗ್ನವಾಯಿತು. ಜೂನ್ 27ರಂದು ನಡೆಯುವ ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

'ಇದೊಂದು ಬೃಹತ್ ಸಾಧನೆ. ಈ ಕುರಿತು ಮಾತನಾಡಲು ನನಗೆ ಪದಗಳೇ ಸಿಗುತ್ತಿಲ್ಲ. ತವರು ದೇಶದಲ್ಲಿ ಸಂಭ್ರಮ ಹೊನಲಾಗಿದೆ’ ಎಂದು ಪಂದ್ಯದ ನಂತರ ರಶೀದ್ ಹೇಳಿದರು. 

ಬಾಂಗ್ಲಾ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ಬ್ಯಾಟಿಂಗ್ ಮಾಡಿತು. ಪಿಚ್‌ನಲ್ಲಿದ್ದ ಸತ್ವವನ್ನು ಬಳಸಿಕೊಂಡ ಬಾಂಗ್ಲಾ ಬೌಲರ್‌ಗಳ ಎದುರು ರಶೀದ್ ಬಳಗವು 5 ವಿಕೆಟ್‌ಗಳಿಗೆ 115 ರನ್ ಗಳಿಸಿತು. ಬಾಂಗ್ಲಾ ಬೌಲರ್‌ಗಳು ಒಟ್ಟು 66 ಡಾಟ್ ಬಾಲ್ ಪ್ರಯೋಗಿಸಿದರು.

ಲೆಗ್‌ಸ್ಪಿನ್ನರ್ ರಿಷದ್ ಹುಸೇನ್ (26ಕ್ಕೆ3) ಪರಿಣಾಮಕಾರಿ ದಾಳಿ ನಡೆಸಿದರು. ಅಫ್ಗಾನಿಸ್ತಾನ ತಂಡದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ (43; 55ಎ) ಬಲ ತುಂಬಿದರು. ಆದರೆ ಆಗಾಗ ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಿಸಲಾಯಿತು. 19 ಓವರ್‌ಗಳಲ್ಲಿ 114 ರನ್‌ಗಳನ್ನು ಗಳಿಸುವ ಗುರಿಯನ್ನು ಬಾಂಗ್ಲಾ ತಂಡಕ್ಕೆ ನಿಗದಿಪಡಿಸಲಾಯಿತು.  ತಂಡವು 3 ವಿಕೆಟ್‌ಗಳಿಗೆ 31 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. 

2017ರಲ್ಲಿ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಸದಸ್ಯತ್ವ ಪಡೆದ ಅಫ್ಗನ್ ತಂಡದ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕಿಟ್ಟಿತು. ಸ್ಪಿನ್ನರ್ ರಶೀದ್ (23ಕ್ಕೆ4) ಮತ್ತು ವೇಗಿ ನವೀನ್ ಉಲ್ ಹಕ್ (26ಕ್ಕೆ4)  ಅವರು ತಂಡದ ಗೆಲುವಿಗೆ ಕಾರಣರಾದರು. 

ಬಾಂಗ್ಲಾ 17.5 ಓವರ್‌ಗಳಲ್ಲಿ 105 ರನ್‌ ಗಳಿಸಿ ಪರಾಭವಗೊಂಡಿತು. ಲಿಟನ್ ದಾಸ್ (ಔಟಾಗದೆ 54) ಅವರ ಛಲದ ಆಟಕ್ಕೆ ತಕ್ಕ ಫಲಿತಾಂಶ ದಕ್ಕಲಿಲ್ಲ. 

ಸೋಮವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 24 ರನ್‌ಗಳಿಂದ ಭಾರತವು ಸೋಲಿಸಿತ್ತು. ಇದರಿಂದಾಗಿ ಅಫ್ಗನ್ ತಂಡದ ಸೆಮಿಫೈನಲ್ ಪ್ರವೇಶದ ಅವಕಾಶ ಉಳಿದಿತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡಿತು. ಯುದ್ಧಪೀಡಿತ ಅಫ್ಗಾನಿಸ್ತಾನದ ಕ್ರಿಕೆಟ್‌ ಪುನರುತ್ಥಾನಕ್ಕೆ ಭಾರತದ ಕೊಡುಗೆಯೂ ಪ್ರಮುಖವಾಗಿದೆ. ಅಫ್ಗನ್ ತಂಡಕ್ಕೆ ಭಾರತವೇ ’ತವರು ತಾಣ’ ಆಗಿದೆ. 

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 115 (ರೆಹಮಾನುಲ್ಲಾ ಗುರ್ಬಾಜ್ 43, ಇಬ್ರಾಹಿಂ ಝದ್ರಾನ್ 18, ರಶೀದ್ ಖಾನ್  ಔಟಾಗದೆ 19, ರಿಷದ್ ಹುಸೇನ್ 26ಕ್ಕೆ3, ತಸ್ಕಿನ್ ಅಹಮದ್ 12ಕ್ಕೆ1) ಬಾಂಗ್ಲಾದೇಶ: 17.5 ಓವರ್‌ಗಳಲ್ಲಿ 105 (ಲಿಟನ್ ದಾಸ್ ಔಟಾಗದೆ 54, ತೌಹಿದ್ ಹೃದಯ್ 14, ನವೀನ್ ಉಲ್ ಹಕ್ 26ಕ್ಕೆ4, ರಶೀದ್ ಖಾನ್ 23ಕ್ಕೆ4) ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 8 ರನ್ ಜಯ (ಮಳೆಯಿಂದಾಗಿ ಡಿಎಲ್ಎಸ್ ನಿಯಮ ಅನ್ವಯ. 19 ಓವರ್‌ಗಳಲ್ಲಿ 114 ರನ್‌ಗಳ ಗುರಿ). ಪಂದ್ಯಶ್ರೇಷ್ಠ: ನವೀನ್ ಉಲ್ ಹಕ್. 

ಅಫ್ಗಾನಿಸ್ತಾನ ತಂಡದ ನಾಯಕ ನಾಯಕ ರಶೀದ್ ಖಾನ್ ಮತ್ತು ಗುಲ್ಬದೀನ್ ನೈಬ್  –ಎಪಿ/ಪಿಟಿಐ ಚಿತ್ರ
ಅಫ್ಗಾನಿಸ್ತಾನ ತಂಡದ ಆಟಗಾರರ ವಿಜಯೋತ್ಸವ  –ಪಿಟಿಐ ಚಿತ್ರ
ಅಫ್ಗಾನಿಸ್ತಾನದಲ್ಲಿ ಜನರು ತಮ್ಮ ದೇಶದ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದರಿಂದ ಸಂಭ್ರಮ ಆಚರಿಸಿದರು  –ಎಎಫ್‌ಪಿ ಚಿತ್ರ
ಸೂಪರ್ 8ರಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾ ವಿರುದ್ಧ ಜಯಿಸಿದ ಅಫ್ಗಾನಿಸ್ತಾನ ಮಳೆ ಅಡ್ಡಿ, ಡಿಎಲ್‌ಎಸ್ ನಿಯಮ ಅನ್ವಯ ಅಫ್ಗಾನಿಸ್ತಾನದಲ್ಲಿ ಬೀದಿಗಿಳಿದು ಸಂಭ್ರಮಿಸಿದ ಜನರು
‘ಅಫ್ಗಾನಿಸ್ತಾನದ ಯುವ ಸಮುದಾಯಕ್ಕೆ ಪ್ರೇರಣೆ‘
ಕಿಂಗ್ಸ್‌ಟೌನ್ (ಪಿಟಿಐ): ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ತಂಡದ ಸಾಧನೆಯು ದೇಶದ ಯುವಜನತೆಗೆ ಪ್ರೇರಣೆಯಾಗಲಿದೆ ಎಂದು ಅಫ್ಗಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ.  ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸೆಮಿಫೈನಲ್ ಪಂದ್ಯವು ಬಹಳ ದೊಡ್ಡ ಪ್ರೇರಣಾದಾಯಿಯಾಗಲಿದೆ. 19 ವರ್ಷದೊಳಗಿನವರ ಟೂರ್ನಿಯಲ್ಲಿ ಈ ಸಾಧನೆಯನ್ನು ನಮ್ಮ ತಂಡದವರು ಮಾಡಿದ್ದರು. ಈ ಟೂರ್ನಿಯಲ್ಲಿ ನಾವು ಸೂಪರ್ 8 ಹಂತ ಪ್ರವೇಶಿಸಿದ್ದೇ ಚೊಚ್ಚಲ ಸಲ. ಇದೀಗ ಸೆಮಿಗೆ ಲಗ್ಗೆ ಇಟ್ಟಿದ್ದು ಬಹುದೊಡ್ಡ ಸಾಧನೆಯಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.  ತಂಡವು ಗೆದ್ದ ಕೂಡಲೇ ಸಹ ಆಟಗಾರರು ನಾಯಕ ರಶೀದ್ ಅವರನ್ನು ಹೆಗಲ ಮೇಲೆ ಹೊತ್ತು ಇಡೀ ಕ್ರೀಡಾಂಗಣದಲ್ಲಿ ಸುತ್ತು ಹಾಕಿದರು.   ಈ ತಂಡವು ಹೋದ ವರ್ಷ ಏಕದಿನ ಕ್ರಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳನ್ನೂ ಸೋಲಿಸಿತ್ತು. 
ವಿವಾದಕ್ಕೆಡೆಯಾದ ನೈಬ್ ಪ್ರಹಸನ
ಕಿಂಗ್ಸ್‌ಟೌನ್ (ಪಿಟಿಐ): ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅಫ್ಗಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್ ಅವರು ‘ಸ್ವಲ್ಪ ನಿಧಾನವಾಗಿ ಆಡಿ ಅವಸರ ಬೇಡ’ ಎಂದು ಸಂಜ್ಞೆ ಮಾಡಿದರು. ಆ ಸಂದರ್ಭದಲ್ಲಿ  ಫೀಲ್ಡರ್ ಗುಲ್ಬದೀನ್ ನೈಬ್ ಅವರು ಸ್ನಾಯುಸೆಳೆತವಾಗಿದೆ ಎಂದು ಕಾಲು ಹಿಡಿದು ನೆಲಕ್ಕೊರಗಿದರು.  ಈ ಪ್ರಹಸನವು ಈಗ ವಿವಾದದ ಕಿಡಿ ಹೊತ್ತಿಸಿದೆ. ಸ್ಲಿಪ್‌ ಸ್ಥಾನದಲ್ಲಿ ಚೆನ್ನಾಗಿಯೇ ಫೀಲ್ಡಿಂಗ್ ಮಾಡುತ್ತಿದ್ದ ನೈಬ್‌ಗೆ ಇದ್ದಕ್ಕಿದ್ದಂತೆ ಸ್ನಾಯುಸೆಳೆತವಾಗಿದ್ದು ಹೇಗೆ  ಇದು ನಾಟಕವೇ ಎಂದು ಹಲವು ಮಾಜಿ ಆಟಗಾರರು ಪ್ರಶ್ನಿಸಿದ್ದಾರೆ.  ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ ಇನಿಂಗ್ಸ್‌ನಲ್ಲಿ ಸ್ಪಿನ್ನರ್ ನೂರ್ ಅಹಮದ್ ಅವರು ಹಾಕಿದ 12ನೇ ಓವರ್‌ನಲ್ಲಿ ಈ ಘಟನೆ ನಡೆಯಿತು.  ಮಳೆ ಬಂದಿದ್ದರಿಂದ ಡಿಎಲ್‌ಎಸ್ ನಿಯಮ ಅನ್ವಯಿಸಲಾಗಿತ್ತು. ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾ ಈ ಸಂದರ್ಭದಲ್ಲಿ 81 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ತಂಡವು ಡಿಎಎಲ್‌ಎಸ್‌ ಪಾರ್ ಸ್ಕೋರ್‌ಗೆ ಎರಡು ರನ್‌ಗಳ ಹಿನ್ನಡೆಯಲ್ಲಿತ್ತು. ‘ನಿಧಾನ ಎಂದು ಕೋಚ್ ಕಳಿಸಿದ ಸಂದೇಶವನ್ನು ಈ  ರೀತಿ ಅರ್ಥ ಮಾಡಿಕೊಂಡು ಮೊದಲ ಸ್ಲಿಪ್‌ನಲ್ಲಿದ್ದವರು ನೆಲಕ್ಕೊರಗುವುದು ಅನವಶ್ಯಕವಾಗಿತ್ತು. ಇದು ಸ್ವೀಕಾರಾರ್ಹವೂ ಅಲ್ಲ’ ಎಂದು ಸೈಮನ್ ಡೋಲ್ ವೀಕ್ಷಕ ವಿವರಣೆಯಲ್ಲಿ ಹೇಳಿದರು.  ‘ಆಸ್ಕರ್ ಏಮಿ?’ ಎಂದು ಜಿಂಬಾಬ್ವೆಯ ವೀಕ್ಷಕ ವಿವರಣೆಗಾರ ಪಾಮಿ ಎಂಬಾಗ್ವಾ (ನೈಬ್ ಅವರದ್ದು ನಟನೆಗೆ ಪ್ರಶಸ್ತಿ ಎಂಬ ವ್ಯಂಗ್ಯ) ಉದ್ಗರಿಸಿದರು.  ಈ ಸಂದರ್ಭದಲ್ಲಿ ನೈಬ್ ಅವರಿಗೆ ಚಿಕಿತ್ಸೆ ನೀಡಲಾಯಿತು. ತಂಡದ ನೆರವು  ಸಿಬ್ಬಂದಿಯು ಸಹ ಆಟಗಾರ ನವೀನ್ ಉಲ್ ಹಕ್ ಅವರೊಂದಿಗೆ ನೈಬ್ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ದರು. ಮತ್ತೆ ಮಳೆ ಸುರಿಯಿತು. ಆಟಗರರೆಲ್ಲರೂ ಓಡಿಹೋಗಿ ಡಗ್‌ ಔಟ್ ಸೇರಿಕೊಂಡು.  ಪಂದ್ಯದ ನಂತರ ಎಕ್ಸ್‌ನಲ್ಲಿ ಸಂದೇಶ್ ಹಾಕಿರುವ ನೈಬ್ ‘ಕೆಲವೊಮ್ಮೆ ಖುಷಿ ಅಥವಾ ದುಃಖ ಆದಾಗ ಈ ರೀತಿಯಾಗುತ್ತದೆ. ಸ್ನಾಯುಸೆಳೆತ’ ಎಂದು ಬರೆದಿದ್ದಾರೆ. ‘ಗುಲ್ಬದೀನ್‌ ನೈಬ್‌ಗೆ ಕೆಂಪು ಕಾರ್ಡ್’ ಎಂದು ಭಾರತದ ಕ್ರಿಕೆಟಿಗ ಅಶ್ವಿನ್ ಸಂದೇಶ ಹಾಕಿದ್ದಾರೆ.

ಲಾರಾ ಮಾತುಗಳಿಂದ ಸ್ಫೂರ್ತಿ: ಖಾನ್‌

ಅರ್ನಾಸ್‌ ವೇಲ್ (ಸೇಂಟ್‌ ವಿನ್ಸೆಂಟ್‌): ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಫ್ತಾನಿಸ್ತಾನ ತಂಡ ಮೊದಲ ಬಾರಿ ಸೆಮಿಫೈನಲ್‌ ತಲುಪುವಲ್ಲಿ ಕ್ರಿಕೆಟ್ ದಂತಕಥೆ ಬ್ರಯಾನ್‌ ಲಾರಾ ಅವರೇ ಸ್ಫೂರ್ತಿ ಎಂದು ಆ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ.

ಒಂದನೇ ಗುಂಪಿನ ರೋಚಕ ಹಣಾಹಣಿಯಲ್ಲಿ ಬಾಂಗ್ಲಾದೇಶದ ಮೇಲೆ ಜಯ ಪಡೆದ ಅಫ್ಗಾನಿಸ್ತಾನ ನಾಲ್ಕರ ಘಟ್ಟ ತಲುಪಿದೆ. ರಶೀದ್ ಖಾನ್ ಬಳಗದ ಗೆಲುವಿನಿಂದಾಗಿ ಆಸ್ಟ್ರೇಲಿಯಾ ಹೊರಬಿದ್ದಿದೆ.

‘ಅಫ್ಗಾನಿಸ್ತಾನ ಸೆಮಿಫೈನಲ್ ತಲುಪಲಿದೆ ಎಂದು ಲಾರಾ ಅವರು ಹಿಂದೆಯೇ ಹೇಳಿದ್ದರು’ ಎಂದು ರಶೀದ್ ನೆನಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.