ADVERTISEMENT

ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ

ಏಜೆನ್ಸೀಸ್
Published 9 ಜೂನ್ 2021, 7:07 IST
Last Updated 9 ಜೂನ್ 2021, 7:07 IST
ಇಯಾನ್ ಮಾರ್ಗನ್, ಜೋಸ್ ಬಟ್ಲರ್
ಇಯಾನ್ ಮಾರ್ಗನ್, ಜೋಸ್ ಬಟ್ಲರ್   

ಲಂಡನ್: ಜನಾಂಗೀಯ ನಿಂದನೆ ಹಾಗೂ ಲಿಂಗತಾರತಮ್ಯ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ' ತೋರಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತುಗೊಳಿಸಿದೆ.

ಈಗ ಹಳೆಯ ಟ್ವೀಟ್ ಎಡವಟ್ಟಿಗೆ ಸಮಾನವಾದ ಆರೋಪವನ್ನು ಇಂಗ್ಲೆಂಡ್ ಏಕದಿನ ತಂಡದ ನಾಯಕ ಇಯಾನ್ ಮಾರ್ಗನ್ ಹಾಗೂ ವಿಕೆಟ್ ಕೀಪರ್ ಜೋಸ್ ಬಟ್ಲರ್ ಎದುರಿಸುತ್ತಿದ್ದಾರೆ.

2012 ಹಾಗೂ 2013ರಲ್ಲಿ ಮಾಡಿದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ, ನ್ಯೂಜಿಲೆಂಡ್ ವಿರುದ್ಧ ಇದೀಗಷ್ಟೇ ಪದಾರ್ಪಣೆ ಪಂದ್ಯ ಆಡಿರುವ ರಾಬಿನ್ಸನ್ ವಿರುದ್ಧ ಇಸಿಬಿ ಕ್ರಮ ಕೈಗೊಂಡಿತ್ತು.

ADVERTISEMENT

ಇದಾದ ಬೆನ್ನಲ್ಲೇ ಮಾರ್ಗನ್ ಹಾಗೂ ಬಟ್ಲರ್ ಹಳೆಯ ಟ್ವೀಟ್‌ಗಳು ಮುನ್ನೆಲೆಗೆ ಬಂದಿವೆ. ಅಭಿಮಾನಿಗಳು ಬಳಸುವ ಆಂಗ್ಲ ಭಾಷೆಯನ್ನು ಅಪಹಾಸ್ಯ ಮಾಡಿದ್ದರು ಎಂಬ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಐಪಿಎಲ್‌ನ ಫ್ರಾಂಚೈಸಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ತರಬೇತುದಾರ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಸಹ ಈ ಸಂಭಾಷಣೆಯ ಭಾಗವಾಗಿದ್ದರು ಎಂದು ಹೇಳಲಾಗಿದೆ.

ಏತನ್ಮಧ್ಯೆ ರಾಬಿನ್ಸನ್ ತಪ್ಪಿನಿಂದ ಪಾಠ ಕಲಿಯುವ ಪ್ರಯತ್ನ ಮಾಡಲಿದ್ದೇವೆ ಎಂದು ಇಂಗ್ಲೆಂಡ್ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡ್ರೆಸನ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇಸಿಬಿ ಶೂನ್ಯ ಸಹಿಷ್ಣುತೆ ನೀತಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗುತ್ತಿದೆ ಎಂದು ಹೇಳಿದ್ದಾರೆ.

ಆ ವಯಸ್ಸಿನಲ್ಲಿ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಆದರೆ ಪಕ್ವತೆ ಪಡೆದಂತೆ ಸುಧಾರಣೆಯಾಗುತ್ತದೆ. ಕಳೆದೊಂದು ವಾರ ನಮ್ಮ ಪಾಲಿಗೆ ಅತ್ಯಂತ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ.

ಸ್ವತಃ ಆ್ಯಂಡ್ರೆಸನ್ ಮಾಡಿರುವ ಹಳೆಯ ಟ್ವೀಟ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕಳೆದೊಂದು ದಶಕದಲ್ಲಿ ತಾನು ಉತ್ತಮ ವ್ಯಕ್ತಿಯಾಗಿ ಬದಲಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.