ADVERTISEMENT

ರೋಹಿತ್ ಶರ್ಮಾ, ವಿರಾಟ್ ನಿವೃತ್ತಿ; ಕಣ್ಮಣಿಗಳಿಗೆ ವಿಜಯದ ವಿದಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 22:57 IST
Last Updated 30 ಜೂನ್ 2024, 22:57 IST
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ   

ಬ್ರಿಜ್‌ಟೌನ್: ಒಬ್ಬರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಇನ್ನೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ತಮ್ಮ ನಿವೃತ್ತಿಯನ್ನು ಘೋಷಿಸಿದರು. 

ಅವರು ಬೇರಾರೂ ಅಲ್ಲ. ಭಾರತ ತಂಡದ ಇಬ್ಬರು ಕಣ್ಮಣಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಶನಿವಾರ ಇಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸಿದ ನಂತರ ಚುಟುಕು ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಘೋಷಿಸಿದರು. 

ಚುಟುಕು ಕ್ರಿಕೆಟ್ ಮಾದರಿಯಿಂದ ಇವರಿಬ್ಬರೂ ಶೀಘ್ರದಲ್ಲಿಯೇ ಹೊರನಡೆಯಲಿದ್ದಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿತ್ತು. ಆದರೆ ಭಾರತ ತಂಡವು ವಿಶ್ವಕಪ್ ಗೆದ್ದ ಸಂದರ್ಭದಲ್ಲಿಯೇ ಅವರು ಇದನ್ನು ಪ್ರಕಟಿಸಿದ್ದಾರೆ. ಇದರೊದಿಗೆ ಈ ಕಾಲಘಟ್ಟದ ಇಬ್ಬರು ಮಹಾನ್ ಆಟಗಾರರ ಟಿ20 ಆಟದ ವೈಭವಕ್ಕೆ ತೆರೆ ಬಿದ್ದಿದೆ.

ADVERTISEMENT

ಈ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವವರ ಪಟ್ಟಿಯಲ್ಲಿ  ರೋಹಿತ್ (4231 ರನ್, 159 ಪಂದ್ಯ)  ಮತ್ತು  ವಿರಾಟ್ ಕೊಹ್ಲಿ (4188 ರನ್, 125 ಪಂದ್ಯ) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನಗಳಲ್ಲಿದ್ದಾರೆ. ವಿರಾಟ್ ಅವರ ಸರಾಸರಿಯು (48.69) ರೋಹಿತ್ ಅವರಿಗಿಂತ (32.05) ಚೆನ್ನಾಗಿದೆ.   

ಆದರೆ ಈ ಟೂರ್ನಿಗೆ ಅವರು ಆಡಲು ಬರುವ ಮುನ್ನ ಕ್ರಿಕೆಟ್ ವಲಯದಲ್ಲಿ ಒಂದು ಚರ್ಚೆ ನಡೆದಿತ್ತು. ಅದೇನೆಂದರೆ; 140ರ ಆಸುಪಾಸಿನಲ್ಲಿರುವ ಇವರಿಬ್ಬರ ಸ್ಟ್ರೈಕ್‌ರೇಟ್ ಇಂದಿನ ಟಿ20 ಮಾದರಿಗೆ ಹೊಂದಾಣಿಕೆಯಾಗುವಂತದ್ದಲ್ಲ. ಆದ್ದರಿಂದ ಇವರಿಬ್ಬರೂ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯವೇ ಎಂಬ ಚರ್ಚೆಗಳು ನಡೆದಿದ್ದವು. 

ಆದರೆ ಇಬ್ಬರೂ ಈ ಸವಾಲನ್ನು ಸ್ವೀಕರಿಸಿದರು. ಜೊತೆಯಾಗಿ ಇನಿಂಗ್ಸ್ ಆರಂಭಿಸಿದರು. ಅದರಲ್ಲಿ ರೋಹಿತ್ ಬಹುಬೇಗ ಆಕ್ರಮಣಶೀಲ ಬ್ಯಾಟಿಂಗ್‌ಗೆ ಒಗ್ಗಿಕೊಂಡರು. ಬೀಸಾಟದ ಮೂಲಕ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. ಆದರೆ ಕೊಹ್ಲಿ ಬೇಗನೆ ಹೊಂದಿಕೊಳ್ಳಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರು ತಮ್ಮ ಸ್ಟ್ರೈಕ್‌ರೇಟ್‌ ಉತ್ತಮಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಲ್ಲಿ ಅವರಿಗೆ ಅದು ಸಾಧ್ಯವಾಗಲಿಲ್ಲ. 8 ಪಂದ್ಯಗಳಿಂದ 151 ರನ್‌ ಗಳಿಸಿದರು. 18.87ರ ಸರಾಸರಿಯಲ್ಲಿ ಅವರು ರನ್‌ ಕಲೆಹಾಕಿದರು.  ಆದರೆ ಫೈನಲ್‌ನಲ್ಲಿ ಅವರು ತೋರಿದ ದಿಟ್ಟತನ ತಂಡದ ಗೆಲುವಿಗೆ ಕಾರಣವಾಯಿತು. ಅವರು ಗಳಿಸಿದ 76 ರನ್‌ಗಳು ಬಹುಕಾಲ ನೆನಪಿನಲ್ಲಿ ಉಳಿಯಲಿವೆ. ಅವರಿಗೂ ಪಂದ್ಯಶ್ರೇಷ್ಠ ಗೌರವ ಒಲಿಯಿತು. 

‘ತಂಡದ ಹೆಚ್ಚು ಅನುಭವಿ ಆಟಗಾರರಾದ ನಮ್ಮ ಮೇಲೆ ಎಲ್ಲರಿಂದಲೂ ಅಪಾರ ನಿರೀಕ್ಷೆಗಳಿರುವುದು ಸಹಜ. ನಮಗೂ ಈ ಮಾದರಿಯಲ್ಲಿ ವಿಶ್ವಕಪ್ ಜಯಿಸಬೇಕೆಂಬ ಅದಮ್ಯ ಗುರಿ ಇತ್ತು. ನಾನು ಮತ್ತು ರೋಹಿತ್ ಈ ಬಗ್ಗೆ ಹಲವಾರು ಬಾರಿ ಆಳವಾಗಿ ಚರ್ಚಿಸಿದ್ದೇವೆ. ಕ್ರೀಸ್‌ಗೆ ಹೋಗುವ ಮುನ್ನ ಸಂಕಲ್ಪ ಮಾಡಿದ್ದೇವೆ’ ಎಂದು ಕೊಹ್ಲಿ ಹೇಳಿದರು. 

ಕೊಹ್ಲಿಗಿಂತ ರೋಹಿತ್ ಅವರು ಇಲ್ಲಿ ಒಂದು ಹೆಜ್ಜೆ ಮುಂದಿದ್ದರು.  ಆಕ್ರಮಣಶೀಲ ಬ್ಯಾಟರ್‌ ಆಗಿರುವ ರೋಹಿತ್ ಆಟ ರಂಗೇರಿತು. ಎಂಟು ಪಂದ್ಯಗಳಿಂದ 257 ರನ್‌ ಕಲೆಹಾಕಿದರು. 156.70ರ ಸ್ಟ್ರೈಕ್‌ರೇಟ್‌ ನಲ್ಲಿ ಅವರು ಈ ರನ್‌ ಗಳಿಸಿದರು. 

ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಅವರು 41 ಎಸೆತಗಳಲ್ಲಿ ಗಳಿಸಿದ್ದ 92 ರನ್‌ಗಳು ಭಾರತದ ಸೆಮಿಫೈನಲ್ ಹಾದಿಯಲ್ಲಿ ನಿಚ್ಚಳಗೊಳಿಸಿದ್ದವು. 37 ವರ್ಷದ ರೋಹಿತ್ ಅವರ ವೃತ್ತಿಜೀವನದಲ್ಲಿ ನೆನಪಿನಲ್ಲಿಡುವಂತಹ ಟೂರ್ನಿ ಇದಾಯಿತು. 

2007ರಲ್ಲಿ ಟಿ20 ವಿಶ್ವಕಪ್ ಜಯಿಸಿದ್ದ ಮಹೇಂದ್ರಸಿಂಗ್ ಧೋನಿ ಬಳಗದಲ್ಲಿ ರೋಹಿತ್ ಆಡಿದ್ದರು. ಇದೀಗ ಕೆರೀಬಿಯನ್ ನಾಡಿನಲ್ಲಿ ವಿಶ್ವಕಪ್ ಜಯಿಸಿದ ತಂಡವನ್ನು ಮುನ್ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.