ADVERTISEMENT

ಬಿಸಿಸಿಐ ವಾರ್ಷಿಕ ಸಭೆ: ದುಲೀಪ್ ಟ್ರೋಫಿಯಲ್ಲಿ ಮತ್ತೆ ವಲಯ ತಂಡಗಳು?

ಬಿಸಿಸಿಐ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ರಾಜ್ಯ ಸಂಸ್ಥೆಗಳ ಆಗ್ರಹ

ಪಿಟಿಐ
Published 29 ಸೆಪ್ಟೆಂಬರ್ 2024, 16:18 IST
Last Updated 29 ಸೆಪ್ಟೆಂಬರ್ 2024, 16:18 IST
   

ಬೆಂಗಳೂರು: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆ ವಲಯವಾರು ತಂಡಗಳನ್ನು ಆಡಿಸುವ ಪದ್ಧತಿಯನ್ನು ಮರಳಿ ಜಾರಿಗೊಳಿಸುವ ಸಾಧ್ಯತೆ ಇದೆ. ಮುಂದಿನ ವರ್ಷದ ಟೂರ್ನಿಯಲ್ಲಿ ವಲಯ ಪದ್ಧತಿ ಜಾರಿಯಾಗಬಹುದು. 

ಈಚೆಗಷ್ಟೇ ನಡೆದಿದ್ದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ನಾಲ್ಕು ತಂಡಗಳನ್ನು ಎ, ಬಿ, ಸಿ ಮತ್ತು ಡಿ ಎಂದು ವಿಂಗಡಿಸಲಾಗಿತ್ತು. ಆದರೆ ಹಳೆಯ ಟೂರ್ನಿಗಳಲ್ಲಿ ಆರು ತಂಡಗಳಿದ್ದವು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಮತ್ತು ನಾರ್ಥ್‌ ಈಸ್ಟ್ ವಲಯ ತಂಡಗಳು ಸೆಣಸುತ್ತಿದ್ದವು. ಈ ಸಲ ನಾಲ್ಕು ತಂಡಗಳನ್ನು ಮಾತ್ರ ಆಡಿಸುವ ಸಲುವಾಗಿ ವಲಯವಾರು ಪದ್ಧತಿಯನ್ನು ಕೈಬಿಡಲಾಗಿತ್ತು. 

ನಗರದಲ್ಲಿ ಭಾನುವಾರ ನಡೆದ ಬಿಸಿಸಿಐನ 93ನೇ ವಾರ್ಷಿಕ ಸರ್ವಸದಸ್ಯಸರ ಸಭೆಯಲ್ಲಿ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಹಳೆಯ ಪದ್ಧತಿಯನ್ನು ಮರಳಿ ಜಾರಿಗೊಳಿಸುವ ಕುರಿತು ಚರ್ಚೆ ನಡೆಯಿತು. 

ADVERTISEMENT

‘ಈ ಸಲ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಅನುಸರಿಸಿದ ಪದ್ಧತಿಯಿಂದ ಎಲ್ಲ ರಾಜ್ಯಗಳ ಆಟಗಾರರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯಲಿಲ್ಲವೆಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳು ದೂರಿದವು. ಇದರಿಂದಾಗಿ ಸಾಂಪ್ರದಾಯಿಕ ಮಾದರಿಯನ್ನು ಅನುಸರಿಸಿ ವಲಯವಾರು ತಂಡಗಳನ್ನು ರಚಿಸುವ ಕುರಿತು ಅಭಿಮತ ವ್ಯಕ್ತಯಿತು. ಇದರಿಂದ ಎಲ್ಲ ರಾಜ್ಯಗಳ ಆಟಗಾರರಿಗೂ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುವ ಆಶಯ ವ್ಯಕ್ತವಾಯಿತು’ ಎಂದು ಸದಸ್ಯರೊಬ್ಬರು ತಿಳಿಸಿದರು. 

ನೂತನ ಕಾರ್ಯದರ್ಶಿ ನೇಮಕ ಪ್ರಕ್ರಿಯೆ: ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ಅವರು ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವರು. ಅದರಿಂದಾಗಿ ನವೆಂಬರ್ ಕೊನೆಯ ವಾರದಲ್ಲಿ ಅವರು ಬಿಸಿಸಿಐ ಹುದ್ದೆಯಿಂದ  ನಿರ್ಗಮಿಸಲಿದ್ದಾರೆ. 

ಇದರಿಂದಾಗಿ ತೆರವಾಗುವ ಕಾರ್ಯದರ್ಶಿ ಹುದ್ದೆಗೆ ಉತ್ತರಾಧಿಕಾರಿಯನ್ನು ನಿಗದಿಪಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಸಭೆಯಲ್ಲಿ ಜಯ್ ಶಾ ಅವರಿಗೆ ಮನವಿ ಮಾಡಲಾಯಿತು. 

ಸಭೆಯ ಅಜೆಂಡಾದಲ್ಲಿ ನೂತನ ಕಾರ್ಯದರ್ಶಿ ನೇಮಕ ಕುರಿತ ಚರ್ಚಿಸುವ ಅಂಶ ಇರಲಿಲ್ಲ. 

‘ಪ್ರಸ್ತುತ ಅಧಿಕಾರದಲ್ಲಿರುವ ಕಾರ್ಯದರ್ಶಿಗೆ ಮನವಿ ಮಾಡುವುದು ಔಪಚಾರಿಕವಾಗಿದೆ. ಐಪಿಎಲ್ ಹರಾಜು ಪ್ರಕ್ರಿಯೆ ಸೇರಿದಂತೆ ಕಲವು ಮಹತ್ವದ ಕಾರ್ಯಕ್ರಮಗಳು ಮುಂಬರಲಿವೆ. ಆದ್ದರಿಂದ ಅಷ್ಟರಲ್ಲಿಯೇ ನೂತನ ಕಾರ್ಯದರ್ಶಿ ನೇಮಕ ಮುಗಿಯಬೇಕಿದೆ‘ ಎಂದು ಮೂಲಗಳೂ ತಿಳಿಸಿವೆ. 

ಶಾ ಅವರ ಸ್ಥಾನಕ್ಕೆ ವಾರಸುದಾರರಾಗಲು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ,  ಬಿಸಿಸಿಐ ಖಜಾಂಚಿ ಆಶಿಶ್ ಶಿಲಾರ್, ಜಂಟಿ ಕಾರ್ಯದರ್ಶಿ ದೇವಜೀತ್ ಸೈಕಿಯಾ, ಗುಜರಾತ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅನಿಲ್ ಪಟೇಲ್ ಅವರು ರೇಸ್‌ನಲ್ಲಿದ್ದಾರೆ. 

ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಸುವ ನಿರ್ದೇಶಕ ಮತ್ತು ಪರ್ಯಾಯ ನಿರ್ದೇಶಕರ ಸ್ಥಾನಗಳಿಗೆ ಇಬ್ಬರ ಹೆಸರು ಸೂಚಿಸುವಂತೆ ಸಭೆಗೆ ಮನವಿ ಮಾಡಲಾಯಿತು. 

ಧುಮಾಲ್ ಮುಂದುವರಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಡಳಿತ ಸಮಿತಿಯ ಮುಖ್ಯಸ್ಥರಾಗಿ ಅರುಣಸಿಂಗ್ ಧುಮಾಲ್ ಮುಂದುವರಿಯಲಿದ್ದಾರೆ. ಬಿಸಿಸಿಐ ಸಭೆಯಲ್ಲಿ   ಧುಮಾಲ್ ಮತ್ತು ಸದಸ್ಯ ಅವಿಷೇಕ್ ದಾಲ್ಮಿಯಾ ಅವರನ್ನು ಆಯ್ಕೆ ಮಾಡಲಾಯಿತು. ಮುಂದಿನ ವರ್ಷದ ಐಪಿಎಲ್ ಮುಕ್ತಾಯದವರೆಗೂ ಅವರು ಮುಂದುವರಿಯುವರು. 

ಆಂಧ್ರದ ಮಾಜಿ ಕ್ರಿಕೆಟಿಗ ವಿ. ಚಾಮುಂಡೇಶ್ವರನಾಥ್ ಅವರನ್ನು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಪ್ರತಿನಿಧಿಯಾಗಿ ಐಪಿಎಲ್ ಆಡಳಿತ ಸಮಿತಿಗೆ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.