ADVERTISEMENT

ಟಿ20 ಕ್ರಿಕೆಟ್: ಭಾರತಕ್ಕೆ ಬೌಲರ್‌ಗಳದ್ದೇ ಚಿಂತೆ

ಪಿಟಿಐ
Published 30 ನವೆಂಬರ್ 2023, 18:29 IST
Last Updated 30 ನವೆಂಬರ್ 2023, 18:29 IST
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಋತುರಾಜ್ ಗಾಯಕವಾಡ  –ಪಿಟಿಐ ಚಿತ್ರ
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಋತುರಾಜ್ ಗಾಯಕವಾಡ  –ಪಿಟಿಐ ಚಿತ್ರ   

ರಾಯಪುರ್: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಶುಕ್ರವಾರ ಆಸ್ಟ್ರೇಲಿಯಾ ಎದುರಿನ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ಆಡಲಿದೆ. 

2–1ರಿಂದ ಮುಂದಿರುವ ಭಾರತ ತಂಡವು ಸರಣಿ ಕೈವಶ ಮಾಡಿಕೊಳ್ಳಲು ಇದು ಸುಸಂದರ್ಭ. ಇಲ್ಲದಿದ್ದರೆ ಬೆಂಗಳೂರಿನಲ್ಲಿ ನಡೆಯುವ ಕೊನೆಯ ಪಂದ್ಯದಲ್ಲಿ ಕಠಿಣ ಹಾದಿ ಸವೆಸಬೇಕಾಗಬಹುದು. ಭಾರತ ತಂಡವು ಮೂರನೇ ಪಂದ್ಯದಲ್ಲಿ  ಋತುರಾಜ್ ಗಾಯಕವಾಡ್ ಅವರ ಸಿಡಿಲಬ್ಬರದ ಶತಕದಿಂದಾಗಿ  ಭಾರತ ತಂಡವು ಬೃಹತ್ ಗುರಿಯನ್ನು ಒಡ್ಡಿತ್ತು. ಆದರೆ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮಿಂಚಿನ ಶತಕವನ್ನು ತಡೆಯಲು ಭಾರತದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಪಂದ್ಯದಲ್ಲಿ ಸೋತಿತು.

ವೇಗಿ ಪ್ರಸಿದ್ಧ ಕೃಷ್ಣ ಕೇವಲ ನಾಲ್ಕು ಓವರ್‌ಗಳಲ್ಲಿ 68 ರನ್‌ಗಳನ್ನು ಕೊಟ್ಟರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಓವರ್‌ನಲ್ಲಿ 21 ರನ್‌ಗಳನ್ನು ಬಿಟ್ಟುಕೊಟ್ಟರು. ಆವೇಶ್ ಖಾನ್ ಕೂಡ ಲೈನ್ ಮತ್ತು ಲೆಂಗ್ತ್‌ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ADVERTISEMENT

ಇದೀಗ ತಂಡಕ್ಕೆ ದೀಪಕ್ ಚಾಹರ್ ಮರಳಿದ್ದಾರೆ. ಆದ್ದರಿಂದ ಅವರ ಮೇಲೆ ಹೊಸ ಚೆಂಡಿನ ಓವರ್‌ಗಳನ್ನು ನಿರ್ವಹಿಸುವ ಹೊಣೆ ಬೀಳುವ ಸಾಧ್ಯತೆ ಇದೆ. ನವವಿವಾಹಿತ ಮುಕೇಶ್ ಕುಮಾರ್ ಒಂದು ಪಂದ್ಯದ ಅನುಪಸ್ಥಿತಿಯ ನಂತರ ತಂಡಕ್ಕೆ ಮರಳಲಿದ್ದಾರೆ.ಆರ್ಷದೀಪ್ ಸಿಂಗ್ ಅವರು ತಮ್ಮ ಎಸೆತಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸುವ ಅಗತ್ಯ ಇದೆ.

ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ಅವರು ಜೊತೆಯಾಟಗಳನ್ನು ಮುರಿಯುವಲ್ಲಿ ಸಫಲರಾದರೆ ಭಾರತದ ಹಾದಿ ಸುಲಭವಾಗಬಹುದು.

ಮರಳಿದ ಶ್ರೇಯಸ್

ವಿಶ್ವಕಪ್ ಟೂರ್ನಿಯ ನಂತರ ವಿಶ್ರಾಂತಿ ಪಡೆದಿದ್ದ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದಾರೆ. ಆದ್ದರಿಂದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಶಾಲಿಯಾಗಿದೆ. ಅವರಿಗಾಗಿ ತಿಲಕ್ ವರ್ಮಾ ಸ್ಥಾನ ಬಿಟ್ಟುಕೊಡಬಹುದು. ಇಲ್ಲದಿದ್ದರೆ ನಾಯಕ ಸೂರ್ಯಕುಮಾರ್ ವಿಶ್ರಾಂತಿ ಪಡೆಯುವ ಸಾಧ್ಯತೆಯೂ ಇದೆ. ಆಗ ಶ್ರೇಯಸ್ ಅವರೇ ತಂಡವನ್ನು ಮುನ್ನಡೆಸಬಹುದು.

ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ ಈಗೊಮ್ಮೆ ಗೆಲುವಿನ ರುಚಿ ಕಂಡಿರುವ ಆಸ್ಟ್ರೇಲಿಯಾ ತಂಡವು ಸರಣಿ ಗೆಲುವಿನ ಆಸೆಯನ್ನು ಜೀವಂತವಾಗುಳಿಸಿಕೊಳ್ಳುವ ಛಲದಲ್ಲಿದೆ.

ಆದರೆ ಈ ಪಂದ್ಯದಲ್ಲಿ ತಂಡಕ್ಕೆ ಮ್ಯಾಕ್ಸ್‌ವೆಲ್ ಲಭ್ಯರಿಲ್ಲ. ವಿಶ್ವಕಪ್ ಫೈನಲ್ ಪಂದ್ಯದ ಹೀರೊ ಟ್ರಾವಿಸ್ ಹೆಡ್ ಮತ್ತು  ವಿಕೆಟ್‌ಕೀಪರ್ ಜೋಶ್ ಇಂಗ್ಲಿಸ್ ತಂಡದಲ್ಲಿದ್ದಾರೆ. ಅವರನ್ನು ನಿಯಂತ್ರಿಸುವ ಸವಾಲು ಆತಿಥೇಯರ ಮುಂದಿದೆ.

ಮೊದಲ ಟಿ20 ಪಂದ್ಯ

ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡಯಲಿರುವ ಮೊದಲ ಅಂತರರಾಷ್ಟ್ರೀಯ ಟಿ20 ಪಂದ್ಯ ಇದಾಗಿದೆ. ಹೋದ ಜನವರಿಯಲ್ಲಿ ಇಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಎದುರು ಜಯಿಸಿತ್ತು. ಆ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮತ್ತು ಬೌಲರ್‌ಗಳು ಪಾರಮ್ಯ ಮೆರೆದಿದ್ದರು. 60 ಸಾವಿರ ಪ್ರೇಕ್ಷಕರ ಆಸನ ಸಾಮರ್ಥ್ಯ ಇರುವ ಈ ಕ್ರೀಡಾಂಗಣದಲ್ಲಿ ಮುಸ್ಸಂಜೆಯ ನಂತರ ಇಬ್ಬನಿಯ ಪರಿಣಾಮ ಹೆಚ್ಚು. ಆದ್ದರಿಂದ ಟಾಸ್ ಜಯಿಸುವ ನಾಯಕ ತೆಗೆದುಕೊಳ್ಳುವ ನಿರ್ಧಾರವೂ ಪ್ರಮುಖವಾಗಲಿದೆ.

ಆಸ್ಟ್ರೇಲಿಯಾ ತಂಡದ ನಾಯಕ ಮ್ಯಥ್ಯೂ ವೇಡ್  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.