ಮುಂಬೈ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಆಟಗಾರರನ್ನು ತವರಿನಲ್ಲಿ ಆದ್ದೂರಿಯಾಗಿ ಬರಮಾಡಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ನಾಯಕ ಅಜಂಕ್ಯ ರಹಾನೆ ಅವರಿಗೆ ವಿಚಿತ್ರವಾದ ಸವಾಲೊಂದು ಎದುರಾಗಿತ್ತು. ಅಜಿಂಕ್ಯ ರಹಾನೆ ಮನೆಯಲ್ಲಿ ಅಭಿಮಾನಿಗಳು ಕಾಂಗರೂ ಹೊಂದಿರುವ ಕೇಕ್ ಸಿದ್ಧಪಡಿಸಿದ್ದರು. ಆದರೆ ಈ ಕೇಕ್ ಕತ್ತರಿಸಲು ಅಜಿಂಕ್ಯ ರಹಾನೆ ನಿರಾಕರಿಸಿದ್ದರು.
ಈ ಕುರಿತು ಖ್ಯಾತ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ನಡೆಸಿದ ಸಂದರ್ಶನದಲ್ಲಿ ಅಜಿಂಕ್ಯ ರಹಾನೆ ಕಾರಣವನ್ನು ವಿವರಿಸುತ್ತಾರೆ.
ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಮೃಗವಾಗಿದ್ದು, ಪಂದ್ಯ ಗೆದ್ದರೂ ಇಲ್ಲದಿದ್ದರೂ ಎದುರಾಳಿಗಳ ಭಾವನೆಗಳನ್ನು ಗೌರವಿಸುವುದು ಅತಿ ಮುಖ್ಯ ಎಂದು ತಿಳಿಸಿದರು.
ಕಾಂಗರೂ ಅಲ್ಲಿನ ರಾಷ್ಟ್ರೀಯ ಮೃಗ. ಹಾಗಾಗಿ ಕೇಕ್ ಕತ್ತರಿಸಲು ನಾನು ಬಯಸಿರಲಿಲ್ಲ. ನೀವು ಗೆದ್ದರೂ, ಸೋತರೂ ಅಥವಾ ಇತಿಹಾಸ ರಚಿಸಿದರೂ ಎದುರಾಳಿ ತಂಡದ ಆಟಗಾರರಿಗೆ ಗೌರವ ಕೊಡುವುದು ಅತ್ಯಗತ್ಯವಾಗಿದೆ ಎಂದು ರಹಾನೆ ವಿವರಿಸಿದರು.
ಎದುರಾಳಿ ತಂಡದ ಬಗ್ಗೆ ಗೌರವ ಹೊಂದಿರಬೇಕು. ಇತರೆ ದೇಶಗಳ ಬಗ್ಗೆಯೂ ಗೌರವ ಹೊಂದಿರಬೇಕು. ಅದೇ ಕಾರಣಕ್ಕಾಗಿಯೇ ಕೇಕ್ ಮೇಲೆ ಕಾಂಗರೂ ಹೊಂದಿರುವುದರಿಂದ ಕತ್ತರಿಸದಿರಲು ನಿರ್ಧರಿಸಿದೆ ಎಂದು ತಿಳಿಸಿದರು.
ಕೂಲ್ ಕಪ್ತಾನ ಅಜಿಂಕ್ಯ ರಹಾನೆ ಹೇಳಿಕೆಯು ಅವರ ಮೇಲಿದ್ದ ಗೌರವವನ್ನು ಇಮ್ಮಡಿಗೊಳಿಸಿದೆ. ಈ ಹಿಂದೆಯೂ ಅನೇಕ ಬಾರಿ ಉತ್ತಮ ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಅಜಿಂಕ್ಯ ರಹಾನೆ ಮನ್ನಣೆಗೆ ಪಾತ್ರವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.