ಮೆಲ್ಬೋರ್ನ್: ಪ್ರವಾಸಿ ಭಾರತ ಹಾಗೂ ಆತಿಥೇಯ ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ರೋಚಕವಾಗಿ ಸಾಗುತ್ತಿದೆ.
ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಅವರನ್ನು ಥರ್ಡ್ ಅಂಪೈರ್ ವಿವಾದಾತ್ಮಕ ರನೌಟ್ ತೀರ್ಪು ನೀಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೊದಲು ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಟೀಮ್ ಪೇನ್‌ಗೆ ಸಮಾನವಾದ ಪರಿಸ್ಥಿತಿ ಎದುರಾಗಿದ್ದರೂ ಅಂಪೈರ್ ನಾಟೌಟ್ ಎಂದು ಘೋಷಿಸಿದ್ದರು. ಇವರೆಡು ರನೌಟ್ ಪ್ರಕರಣಗಳನ್ನುಹೋಲಿಕೆಮಾಡಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ವಿರುದ್ಧ ತಮ್ಮ ಅಸಾಮಾಧಾನವನ್ನು ತೋಡಿಕೊಂಡಿದ್ದಾರೆ.
ಟೆಸ್ಟ್ ವೃತ್ತಿ ಜೀವನದಲ್ಲಿ 12ನೇ ಶತಕ ಬಾರಿಸಿರುವ ಅಜಿಂಕ್ಯ ರಹಾನೆ ಅವರು ರವೀಂದ್ರ ಜಡೇಜ ಜೊತೆಗೆ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಈ ನಡುವೆ ಭಾರತ ಇನ್ನಿಂಗ್ಸ್‌ನ 100ನೇ ಓವರ್‌ನಲ್ಲಿ ಜಡೇಜ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಅಜಿಂಕ್ಯ ರಹಾನೆ ರನೌಟ್ ಬಲೆಗೆ ಸಿಲುಕಿದರು.
ಆದರೆ ಇದು ಔಟ್ ಅಥವಾ ನಾಟೌಟ್ ಎಂಬುದು ಗೊಂದಲಕ್ಕೀಡಾಗಿದೆ. ಸಾಮಾನ್ಯವಾಗಿ 'ಬೆನಿಫಿಟ್ ಆಫ್ ಡೌಟ್' ಬ್ಯಾಟ್ಸ್‌ಮನ್ ಪಾಲಾಗಬೇಕು. ಆದರೆ ಈ ಬಾರಿ ಥರ್ಡ್ ಅಂಪೈರ್ ಔಟ್ ತೀರ್ಪು ನೀಡಿದರು.
ಇದಕ್ಕೂ ಮೊದಲು ಭಾರತ ಫೀಲ್ಡಿಂಗ್ ವೇಳೆಯಲ್ಲಿ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್‌ಗೆ ಸಮಾನ ಪರಿಸ್ಥಿತಿ ಎದುರಾಗಿದ್ದರೂ ಥರ್ಡ್ ಅಂಪೈರ್ ಔಟ್ ನೀಡಿರಲಿಲ್ಲ.
ಆಕರ್ಷಕ ಶತಕ ಸಾಧನೆ ಮಾಡಿರುವ ಅಜಿಂಕ್ಯ ರಹಾನೆ 112 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು. ಈ ಮೂಲಕ 326 ರನ್ ಪೇರಿಸಿರುವ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 131 ರನ್‌ಗಳ ಮುನ್ನಡೆ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.