ನವದೆಹಲಿ: ‘ಪ್ರತಿ ಬಾರಿ ಕ್ರೀಡಾಂಗಣಕ್ಕೆ ಇಳಿಯುತ್ತಿದ್ದಾಗ ನಾನು 21 ಮಂದಿಯ ವಿರುದ್ಧ ಆಡುತ್ತಿದ್ದೆ. 11 ಮಂದಿ ಎದುರಾಳಿ ತಂಡದವರಾದರೆ, 10 ಮಂದಿ ನಮ್ಮವರೇ’ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ತಂಡದ ಸಹ ಆಟಗಾರರ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಮತ್ತೆ ಕೆದಕಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಹಗರಣ ಕಳೆದ ದಶಕದ ಕೊನೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ಗೆ ಕಳಂಕ ಮೂಡಿಸಿತ್ತು. 2011ರಲ್ಲಿ ಆರಂಭ ಆಟಗಾರ ಸಲ್ಮಾನ್ ಬಟ್, ಯುವ ವೇಗದ ಬೌಲರ್‌ಗಳಾಗಿದ್ದ ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ಆಸಿಫ್ ಅವರನ್ನು ಆಟದಿಂದ ಐದು ವರ್ಷ ನಿಷೇಧಿಸಲಾಗಿತ್ತು.
‘ನನ್ನಿಂದ ಪಾಕಿಸ್ತಾನ ತಂಡಕ್ಕೆ ಮೋಸ ಆಗಲಾರದು, ಮ್ಯಾಚ್ ಫಿಕ್ಸಿಂಗ್ ಆಗಲಾರದು ಎಂಬ ದೃಢ ನಂಬಿಕೆ ಹೊಂದಿದ್ದೆ. ಆದರೆ ನಾನು ಮ್ಯಾಚ್‌ಫಿಕ್ಸರ್‌ಗಳಿಂದ ಸುತ್ತುವರಿದಿದ್ದೆ. ನಾನು 21 ಮಂದಿ ವಿರುದ್ಧ ಆಡುತ್ತಿದ್ದೆ. 11 ಮಂದಿ ಎದುರಾಳಿ ತಂಡದ, 10 ಮಂದಿ ನಮ್ಮವರ ವಿರುದ್ಧ. ಯಾರಿಗೆ ಗೊತ್ತು, ಯಾರು ಫಿಕ್ಸರ್‌ಗಳೆಂದು’ ಎಂದು ‘ರಿವೈಂಡ್ ವಿತ್ ಸಮೀನಾ ಪೀರ್‌ಝಾದಾ’ ಟಾಕ್ ಷೊನಲ್ಲಿ ಅಖ್ತರ್ ವಿವರಿಸಿದ್ದಾರೆ.
‘ಹೆಚ್ಚಿನ ಪಂದ್ಯಗಳು ಹೊಂದಾಣಿಕೆಯಿಂದ ನಡೆಯುತ್ತಿದ್ದವು. ಯಾವ ಪಂದ್ಯಗಳು ಫಿಕ್ಸ್ ಆಗಿರುತ್ತಿದ್ದವು ಮತ್ತು ಹೇಗೆ ಫಿಕ್ಸ್ ಮಾಡಲಾಗುತಿತ್ತು ಎಂಬುದನ್ನು ಆಸಿಫ್ ನನಗೆ ಹೇಳಿದ್ದರು’ ಎಂದು 44 ವರ್ಷದ ಆಖ್ತರ್ ಬಹಿರಂಗಪಡಿಸಿದ್ದಾರೆ.
‘ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಆಮಿರ್ ಮತ್ತು ಆಸಿಫ್ ಅಕ್ರಮದಲ್ಲಿ ಭಾಗಿಯಾವುದು ಗೊತ್ತಾದಾಗ ನಾನು ಕ್ರುದ್ಧನಾಗಿದ್ದೆ’ ಎಂದು ಅಖ್ತರ್ ಹೇಳಿದ್ದಾರೆ.
‘ಅವರಿಗೆ ಬುದ್ಧಿ ಹೇಳಲು ಪ್ರಯತ್ನಿಸಿದೆ. ಎಂಥ ಪ್ರತಿಭೆಗಳನ್ನು ಕಳೆದುಕೊಂಡೆವು. ಪಾಕಿಸ್ತಾನದ ಇಬ್ಬರು ಪ್ರತಿಭಾನ್ವಿತ, ಪರಿಪೂರ್ಣ ಬೌಲರ್‌ಗಳು ವ್ಯರ್ಥವಾಗಿ ಹೋದವರು. ಅಲ್ಪಹಣಕ್ಕಾಗಿ ತಮ್ಮನ್ನು ಮಾರಿಕೊಂಡರು’ ಎಂದು ನುಡಿದಿದ್ದಾರೆ.
ನಿಷೇಧ ಅನುಭವಿಸಿದ ಮೂವರಲ್ಲಿ ಆಮಿರ್ ಮಾತ್ರ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಇಂಗ್ಲೆಂಡ್‌ನಲ್ಲಿ ಕಳೆದ ಜೂನ್–ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.