ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, 41 ಮಂದಿ ಗಾಯಗೊಂಡಿದ್ದರು.
ಈ ದಾಳಿಯನ್ನು ಖಂಡಿಸಿ ಭಾರತದೆಲ್ಲೆಡೆ ವ್ಯಾಪಕ ಆಕ್ರೋಶ ಭುಗಿಲೆದ್ದಿತ್ತು. 'ಆಲ್ ಐಸ್ ಆನ್ ವೈಷ್ಣೋದೇವಿ ಅಟ್ಯಾಕ್' ಎಐ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಮಂದಿ ಹಂಚಿಕೊಂಡಿದ್ದರು.
ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಕೂಡ, ಭಾರತದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದರು.
ಆದರೆ ಹಸನ್ ಅಲಿ ಅವರಿಗೆ ಪಾಕಿಸ್ತಾನದಿಂದಲೇ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಲಿ, 'ಭಯೋತ್ಪಾದನೆ ಅಥವಾ ಹಿಂಸಾಚಾರ ಯಾವುದೇ ಧರ್ಮ ಅಥವಾ ಜನಾಂಗದ ವಿರುದ್ಧವಾದರೂ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಇದನ್ನು ಹಂಚಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.
'ನನ್ನಿಂದ ಹೇಗೆ ಸಾಧ್ಯವೋ ಶಾಂತಿಯನ್ನು ಬೆಂಬಲಿಸಲು ಪ್ರಯತ್ನಿಸುತ್ತೇನೆ. ಗಾಜಾದಲ್ಲಿ ನಡೆದ ದಾಳಿಯನ್ನು ನಾನು ಯಾವತ್ತೂ ಖಂಡಿಸುತ್ತೇನೆ. ಅಮಾಯಕರ ಮೇಲಿನ ದಾಳಿಯನ್ನು ಖಂಡಿಸುವುದನ್ನು ಮುಂದುರಿಸುತ್ತೇನೆ. ಪ್ರತಿಯೊಂದು ಜೀವವೂ ಮುಖ್ಯ' ಎಂದು ಹೇಳಿದ್ದಾರೆ.
ರಿಯಾಸಿ ಜಿಲ್ಲೆಯ ಪೋನಿ ಪ್ರದೇಶದ ತೇರ್ಯತ್ ಗ್ರಾಮದಲ್ಲಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
29 ವರ್ಷದ ಹಸನ್ ಅಲಿ ಪಾಕಿಸ್ತಾನ ಪರ 24 ಟೆಸ್ಟ್, 66 ಏಕದಿನ ಹಾಗೂ 55 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಪ್ರಸಕ್ತ ಸಾಗುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಅವರು ಭಾರತೀಯ ಮೂಲದ ಸಮಿಯಾ ಅವರನ್ನು ವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.