ADVERTISEMENT

IPL 2024: ಮುಂಬೈ ಇಂಡಿಯನ್ಸ್‌ಗೆ ಮೊದಲ ಜಯ

ಶೇಫರ್ಡ್‌ ಅಬ್ಬರದ ಆಟ; ಸ್ಟಬ್ಸ್‌ ಭರ್ಜರಿ ಬ್ಯಾಟಿಂಗ್

ಪಿಟಿಐ
Published 7 ಏಪ್ರಿಲ್ 2024, 16:13 IST
Last Updated 7 ಏಪ್ರಿಲ್ 2024, 16:13 IST
ರೊಮೆರಿಯೊ ಶೇಫರ್ಡ್‌ ಬ್ಯಾಟಿಂಗ್ ವೈಖರಿ  –ಪಿಟಿಐ ಚಿತ್ರ
ರೊಮೆರಿಯೊ ಶೇಫರ್ಡ್‌ ಬ್ಯಾಟಿಂಗ್ ವೈಖರಿ  –ಪಿಟಿಐ ಚಿತ್ರ   

ಮುಂಬೈ: ಅಂತೂ ಇಂತೂ ಮುಂಬೈ ಇಂಡಿಯನ್ಸ್ ತಂಡವು ಸೋಲಿನ ಸರಪಳಿ ಕಳಚಿಕೊಂಡಿತು. 

ಭಾನುವಾರ ವಾಂಕೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡವು 29 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಜಯಿಸಿತು. ಮುಂಬೈ ತಂಡವು ತನ್ನ ಮೊದಲ ಮೂರು ಪಂದ್ಯಗಳಲ್ಲಿ ಸೋತಿತ್ತು. ಈ ಟೂರ್ನಿಯಲ್ಲಿ ತಂಡಕ್ಕೆ ಇದು ಮೊದಲ ಜಯವಾಗಿದೆ. 

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಫೀಲ್ಡಿಂಗ್ ಆಯ್ಕೆ  ಮಾಡಿಕೊಂಡಿತು.  10 ಎಸೆತಗಳಲ್ಲಿ 39 ರನ್‌ ಗಳಿಸಿದ ರೊಮೆರಿಯೊ ಶೆಫರ್ಡ್ ಮತ್ತು ಟಿಮ್ ಡೇವಿಡ್ (21 ಎಸೆತಗಳಲ್ಲಿ ಅಜೇಯ 45) ಅಬ್ಬರದ ಬ್ಯಾಟಿಂಗ್‌ನಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 234 ರನ್‌ಗಳ ದೊಡ್ಡ ಮೊತ್ತ ಗಳಿಸಿತು. 

ADVERTISEMENT

ಇದಕ್ಕುತ್ತರವಾಗಿ ಡೆಲ್ಲಿ ತಂಡದ ಪೃಥ್ವಿ ಶಾ (66; 40ಎ) ಮತ್ತು ಟ್ರಿಸ್ಟನ್ ಸ್ಟಬ್ಸ್‌ (ಔಟಾಗದೆ 71; 25ಎ) ಅವರು ಬಿರುಸಿನ ಬ್ಯಾಟಿಂಗ್ ಮಾಡಿದರು. ಆದರೂ ತಂಡವು ಗೆಲುವಿನ ದಡ ಸೇರಲಿಲ್ಲ. ಗೆರಾಲ್ಡ್ ಕೊಯಿಜಿ (34ಕ್ಕೆ4) ಅವರು ಡೆಲ್ಲಿ ತಂಡದ ಜಯದ ಆಸೆಗೆ ಅಡ್ಡಿಯಾದರು. 

16ನೇ ರಿಷಭ್ ಪಂತ್ ಅವರು ಕೇವಲ ಒಂದು ರನ್ ಗಳಿಸಿ ಔಟಾದಾಗ ತಂಡದ ಮೊತ್ತವು 153 ರನ್‌ಗಳಾಗಿದ್ದವು. ಆಗ ಕ್ರೀಸ್‌ನಲ್ಲಿದ್ದ ಸ್ಟಬ್ಸ್‌ ಅವರು ಅಕ್ಷರ್‌ ಪಟೇಲ್ ಜೊತೆಗೂಡಿ ರನ್‌ ಗಳಿಕೆಗೆ ವೇಗ ನೀಡಿದರು. ಅದರಲ್ಲೂ ಸ್ಟಬ್ಸ್‌ ದೊಡ್ಡ ಹೊಡೆತಗಳು ಮುಂಬೈನಿಂದ ಗೆಲುವು ಕಸಿಯುವ ನಿರೀಕ್ಷೆ ಮೂಡಿಸಿದ್ದವು. 

ಅದರಲ್ಲಿಯೂ ಅವರು ಶೆಫರ್ಡ್ ಹಾಕಿದ 19ನೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದರು. ಅದಕ್ಕೂ ಮುನ್ನ ಗೆರಾಲ್ಡ್ ಓವರ್‌ನಲ್ಲಿಯೂ ಸಿಕ್ಸರ್ ಸಿಡಿಸಿದ್ದರು. 13ನೇ ಓವರ್‌ನಲ್ಲಿ ಸ್ಪಿನ್ನರ್ ಪಿಯೂ ಷ್ ಚಾವ್ಲಾ ಎಸೆತವನ್ನೂ ಪ್ರೇಕ್ಷಕರ ಗ್ಯಾಲರಿಗೆ ಕಳಿಸಿದ್ದರು. ಆದರೆ 19ನೇ ಓವರ್‌ನಲ್ಲಿ ಅಕ್ಷರ್ (8 ರನ್) ಅವರು ಔಟ್ ಆದ ನಂತರ ಉಳಿದ ಬ್ಯಾಟರ್‌ಗಳಿಂದ ಉತ್ತಮ ಬೆಂಬಲ ದೊರೆಯಲಿಲ್ಲ. ಇದರಿಂದಾಗಿ ರನ್‌ ವೇಗ ಕಡಿತವಾಯಿತು. ಕೊನೆಯ ಓವರ್‌ನಲ್ಲಿ ಕುಮಾರ ಕುಶಾಗ್ರ, ಲಲಿತ್ ಯಾದವ್ ಮತ್ತು ಜೇ ರಿಚರ್ಡ್ಸನ್ ಅವರ ವಿಕೆಟ್‌ಗಳನ್ನು ಗೆರಾಲ್ಡ್‌ ತಮ್ಮ ಬುಟ್ಟಿಗೆ ಹಾಕಿಕೊಂಡರು. ಸ್ಟಬ್ಸ್‌ ಇನ್ನೊಂದು ಬದಿಯಲ್ಲಿದ್ದರು. ಒಟ್ಟು 7 ಸಿಕ್ಸರ್ ಮತ್ತು 3 ಬೌಂಡರಿ ಹೊಡೆದ ಸ್ಟಬ್ಸ್‌ 284ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. 

ರೋಹಿತ್–ಇಶಾನ್ ಜೊತೆಯಾಟ: ಮುಂಬೈ ತಂಡಕ್ಕೆ ರೋಹಿತ್ (49 ರನ್) ಮತ್ತು ಇಶಾನ್ ಕಿಶನ್ (42 ರನ್) ಅವರು ಉತ್ತಮ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ವಿಕೆಟ್‌ ಬೀಳದಂತೆ ತಡೆದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. 

ದೀರ್ಘ ಸಮಯದ ನಂತರ ಕ್ರಿಕೆಟ್‌ ಅಂಗಳಕ್ಕೆ ಮರಳಿದ ಸೂರ್ಯಕುಮಾರ್ ಯಾದವ್ ಖಾತೆಯನ್ನೇ ತೆರೆಯಲಿಲ್ಲ. ಆದರೆ ನಾಯಕ ಹಾರ್ದಿಕ್ (39 ರನ್), ಟಿಮ್ ಡೇವಿಡ್ (ಔಟಾಗದೆ 45) ಮತ್ತು ಶೆಫರ್ಡ್‌ ಅಬ್ಬರದ ಆಟವಾಡಿ ದೊಡ್ಡ ಮೊತ್ತ ಗಳಿಸಲು ನೆರವಾದರು. 

ವೆಸ್ಟ್ ಇಂಡೀಸ್ ಆಲ್‌ರೌಂಡರ್ ಶೇಫರ್ಡ್ 390ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು. 4 ಸಿಕ್ಡರ್ ಮತ್ತು ಮೂರು ಬೌಂಡರಿ ಬಾರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.