ADVERTISEMENT

ಮಹಿಳಾ ವಿಶ್ವಕಪ್ ಫೈನಲ್: ಅಲಿಸಾ ಹೀಲಿ ಶತಕದ ಆಟ, ಮುರಿದ ದಾಖಲೆಗಳೆಷ್ಟು ಗೊತ್ತಾ? 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಏಪ್ರಿಲ್ 2022, 6:21 IST
Last Updated 3 ಏಪ್ರಿಲ್ 2022, 6:21 IST
ಅಲಿಸಾ ಹೀಲಿ ಶತಕದ ಸಂಭ್ರಮ
ಅಲಿಸಾ ಹೀಲಿ ಶತಕದ ಸಂಭ್ರಮ   

ಕ್ರೈಸ್ಟ್ ಚರ್ಚ್‌: ಐಸಿಸಿ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು (ಭಾನುವಾರ) ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಶತಕ (170) ಸಿಡಿಸಿ ಸಂಭ್ರಮಿಸಿದ್ದಾರೆ.

ಈ ಶತಕದೊಂದಿಗೆ 32 ವರ್ಷದ ಹೀಲಿ, ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ ಎನಿಸಿಕೊಂಡರು. ಜತೆಗೆ, ನ್ಯೂಜಿಲೆಂಡ್‌ ತಂಡದ ರಾಚೆಲ್ ಪ್ರೀಸ್ಟ್ ಬಳಿಕ ವಿಶ್ವಕಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ.

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ್ತಿಯೂ ಆಗಿದ್ದಾರೆ. ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ (509) ಗಳಿಸಿದ ಮೊದಲ ಆಟಗಾರ್ತಿಯಾಗಿದ್ದಾರೆ.

ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 2,500 ರನ್ ಪೂರೈಸಿದ ಆಸ್ಟ್ರೇಲಿಯಾದ 9ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆಸ್ಟ್ರೇಲಿಯಾ, 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 356 ರನ್ ಗಳಿಸಿತು.

138 ಎಸೆತಗಳನ್ನು ಎದುರಿಸಿದ ಅಲಿಸಾ ಹೀಲಿ ಇನ್ನಿಂಗ್ಸ್‌ನಲ್ಲಿ 26 ಬೌಂಡರಿಗಳು ಸೇರಿದ್ದವು. ರಚೆಲ್ ಹೇನ್ಸ್ 68, ಬೆಥ್ ಮೂನಿ 62 ರನ್‌ ಗಳಿಸಿ ಅಲಿಸಾಗೆ ಸಾಥ್ ನೀಡಿದರು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಉಭಯ ತಂಡಗಳು ಫೈನಲ್‌ನಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ಈ ಬಾರಿಯ ಟೂರ್ನಿಯಲ್ಲಿ 135 ರನ್ ಗಳಿಸಿದ್ದ ಆಸೀಸ್ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಹಿಂದಿಕ್ಕಿರುವ ಅಲಿಸಾ ಹೀಲಿ, ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (170 ರನ್) ದಾಖಲಿಸಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಹೀಲಿ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ.

ಅಲಿಸಾ ಹುರಿದುಂಬಿಸಿದ ‘ಮಿಚೆಲ್ ಸ್ಟಾರ್ಕ್’
ಅಲಿಸಾ ಹೀಲಿ ಅವರ ಪತಿ, ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರು ಪಂದ್ಯ ವೀಕ್ಷಿಸಿದರು. ಜತೆಗೆ, ಹೀಲಿ ಅವರನ್ನು ಹುರಿದುಂಬಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.