ADVERTISEMENT

ICC T20 World Cup 2021: ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಅಕ್ಟೋಬರ್ 2021, 11:15 IST
Last Updated 16 ಅಕ್ಟೋಬರ್ 2021, 11:15 IST
ಚಿತ್ರ ಕೃಪೆ: ಐಸಿಸಿ
ಚಿತ್ರ ಕೃಪೆ: ಐಸಿಸಿ   

ದುಬೈ: ಬಹುನಿರೀಕ್ಷಿತ ಐಸಿಸಿ ಪುರುಷರ ಟ್ವೆಂಟಿ-20 ವಿಶ್ವಕಪ್‌ಗೆ ಅಕ್ಟೋಬರ್ 17 ಭಾನುವಾರ ಚಾಲನೆ ಸಿಗಲಿದೆ. ಭಾರತ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ. ನವೆಂಬರ್ 14ರಂದು ದುಬೈಯಲ್ಲಿ ಫೈನಲ್ ನೆರವೇರಲಿದೆ.

ಬಿಸಿಸಿಐ ಆತಿಥ್ಯ ವಹಿಸುತ್ತಿರುವ ಟ್ವೆಂಟಿ-20 ವಿಶ್ವಕಪ್, ಕೋವಿಡ್ ಹಿನ್ನೆಲೆಯಲ್ಲಿ ಭಾರತದಿಂದ ಯುಎಇ ಹಾಗೂ ಒಮಾನ್‌ಗೆ ಸ್ಥಳಾಂತರಿಸಲಾಗಿದೆ.

ಮೊದಲ ಹಂತದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇಲ್ಲಿ ಎಂಟು ತಂಡಗಳು ಸೆಣಸಲಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು 'ಸೂಪರ್ 12' ಹಂತಕ್ಕೆ ಅರ್ಹತೆಯನ್ನು ಗಿಟ್ಟಿಸಲಿದೆ.

ADVERTISEMENT

ಗುಂಪು 'ಎ': ನಮೀಬಿಯಾ, ಹಾಲೆಂಡ್, ಶ್ರೀಲಂಕಾ, ಐರ್ಲೆಂಡ್.
ಗುಂಪು 'ಬಿ': ಒಮಾನ್, ಪಪುವಾ ನ್ಯೂಗಿನಿ, ಸ್ಕಾಟ್ಲೆಂಡ್, ಬಾಂಗ್ಲಾದೇಶ.

ಸೂಪರ್ 12 ಹಂತವನ್ನು ತಲಾ ಆರು ತಂಡಗಳಂತೆ ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

ಗುಂಪು 1: ವೆಸ್ಟ್‌ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಎ1, ಬಿ2
ಗುಂಪು 2: ಅಫ್ಗಾನಿಸ್ತಾನ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಿ1, ಎ2.

ಭಾರತದ ಪಂದ್ಯಗಳ ವೇಳಾಪಟ್ಟಿ ಇಂತಿದೆ:
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 24 ಭಾನುವಾರದಂದು ದುಬೈಯಲ್ಲಿ ನಡೆಯಲಿದೆ.

ಅ. 24: ಭಾರತ vs ಪಾಕಿಸ್ತಾನ, ದುಬೈ
ಅ. 31: ಭಾರತ vs ನ್ಯೂಜಿಲೆಂಡ್, ದುಬೈ
ನ. 03: ಭಾರತ vs ಅಫ್ಗಾನಿಸ್ತಾನ, ಅಬುಧಾಬಿ
ನ. 05: ಭಾರತ vs ಬಿ1, ದುಬೈ
ನ. 08: ಭಾರತ vs ಎ1, ದುಬೈ

ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 3.30 ಹಾಗೂ ರಾತ್ರಿ 7.30ಕ್ಕೆ ಸರಿಯಾಗಿ ಆರಂಭವಾಗಲಿವೆ. ಭಾರತದ ಪಂದ್ಯಗಳು ರಾತ್ರಿ 7.30ಕ್ಕೆ ನಿಗದಿಯಾಗಿವೆ.

ಸೂಪರ್ 12 ಹಂತದಲ್ಲಿ ಗುಂಪು 1 ಹಾಗೂ ಗುಂಪು 2ರಲ್ಲಿ ಅಗ್ರಸ್ಥಾನ ಪಡೆದ ತಲಾ ಎರಡು ತಂಡಗಳು ಸೆಮಿಫೈನಲ್ ಹಂತಕ್ಕೆ ತೇರ್ಗಡೆಯನ್ನು ಹೊಂದಲಿವೆ.

ದುಬೈ, ಶಾರ್ಜಾ, ಅಬುಧಾಬಿ, ಹಾಗೂ ಒಮಾನ್ ಮೈದಾನಗಳಲ್ಲಿ ಪಂದ್ಯಗಳು ಆಯೋಜನೆಯಾಗಲಿವೆ. ಗುಂಪು ಹಂತದಲ್ಲಿ ಗೆಲುವಿಗೆ ಎರಡು ಅಂಕ ಮತ್ತು 'ಟೈ' ಅಥವಾ ಪಂದ್ಯ ರದ್ದಾದಲ್ಲಿ ಒಂದು ಅಂಕವನ್ನು ವಿತರಿಸಲಾಗುವುದು. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ 'ರಿಸರ್ವ್ ಡೇ' ಒದಗಿಸಲಾಗಿದೆ.

ಟ್ವೆಂಟಿ-20 ವಿಶ್ವಕಪ್ ವಿಜೇತ ತಂಡಗಳು:
2007: ಭಾರತ
2009: ಪಾಕಿಸ್ತಾನ
2010: ಇಂಗ್ಲೆಂಡ್
2012: ವೆಸ್ಟ್‌ಇಂಡೀಸ್
2014: ಶ್ರೀಲಂಕಾ
2016: ವೆಸ್ಟ್‌ಇಂಡೀಸ್

2007ರಲ್ಲಿ ಚೊಚ್ಚಲ ವಿಶ್ವಕಪ್ ಭಾರತ ಗೆದ್ದಿದ್ದರೆ ವೆಸ್ಟ್‌ಇಂಡೀಸ್ ಗರಿಷ್ಠ ಎರಡು ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಈಗ ಐದು ವರ್ಷಗಳ ಬಳಿಕ ಚುಟುಕು ವಿಶ್ವಕಪ್ ಆಯೋಜನೆಗೆ ವೇದಿಕೆ ಸಜ್ಜುಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.