ವೆಲಿಂಗ್ಟನ್: ಓಪನರ್ ಫಿನ್ ಅಲೆನ್ ಕೇವಲ 62 ಎಸೆತಗಳಲ್ಲಿ 137 ರನ್ ಚಚ್ಚಿದರು. ಅವರ ದಾಖಲೆಯ ಆಟದ ನೆರವಿನಿಂದ ನ್ಯೂಜಿಲೆಂಡ್ ತಂಡ ಡ್ಯುನೆಡಿನ್‌ನಲ್ಲಿ ಬುಧವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 45 ರನ್‌ಗಳಿಂದ ಸೋಲಿಸಿ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿತು.
ಐದು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 3–0 ಮುನ್ನಡೆ ಪಡೆಯಿತು. ಅದು ಮೊದಲ ಎರಡು ಪಂದ್ಯಗಳನ್ನು 46 ಮತ್ತು 21 ರನ್‌ಗಳಿಂದ ಜಯಿಸಿತ್ತು. ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ನ್ಯೂಜಿಲೆಂಡ್ 7 ವಿಕೆಟ್‌ಗೆ 224 ರನ್ ಹೊಡೆದರೆ, ಪಾಕಿಸ್ತಾನ 7 ವಿಕೆಟ್‌ಗೆ 179 ರನ್ ಗಳಿಸಲಷ್ಟೇ ಶಕ್ತವಾಯಿತು.
ಎರಡನೇ ಪಂದ್ಯದಲ್ಲಿ 21 ಎಸೆತಗಳಲ್ಲಿ 46 ರನ್ ಬಾರಿಸಿದ್ದ ಅಲೆನ್, ತಮ್ಮ ಸ್ಫೋಟಕ ಇನಿಂಗ್ಸ್‌ನಲ್ಲಿ 16 ಸಿಕ್ಸರ್, ಐದು ಬೌಂಡರಿಗಳನ್ನು ಚಚ್ಚಿದರು. ಇದು ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರನೊಬ್ಬನ ಗರಿಷ್ಠ ಮೊತ್ತ. ಈ ಹಿಂದೆ ಬ್ರೆಂಡನ್ ಮೆಕ್ಕಲಂ 123 ರನ್ ಗಳಿಸಿದ್ದು ಇದುವರೆಗಿನ ಅತ್ಯಧಿಕ ಎನಿಸಿತ್ತು. ಇನಿಂಗ್ಸ್ ಒದರಲ್ಲಿ 16 ಸಿಕ್ಸರ್ ಹೊಡೆದಿದ್ದ ಅಫ್ಗಾನಿಸ್ತಾನದ ಹಜ್ಮತ್‌ಉಲ್ಲಾ ಝಝೈ ಅವರ ದಾಖಲೆಯನ್ನೂ ಅಲೆನ್ ಸರಿಗಟ್ಟಿದರು. ಮೂರು ಸಿಕ್ಸರ್‌ಗಳು ಮೈದಾನದ ಆಚೆ ಬಿದ್ದ ಕಾರಣ ಮೂರು ಬಾರಿ ಚೆಂಡುಗಳನ್ನು ಬದಲಿಸಬೇಕಾಯಿತು.
ಉತ್ತರವಾಗಿ 11ನೆ ಓವರ್‌ನಲ್ಲಿ 2 ವಿಕೆಟ್‌ಗೆ 95 ರನ್ ಗಳಿಸಿದ್ದ ಪಾಕಿಸ್ತಾನ ನಂತರ 39 ರನ್ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದು ಒತ್ತಡಕ್ಕೆ ಒಳಗಾಯಿತು. ಪಾಕ್ ಪರ ಬಾಬರ್ ಆಜಂ 37 ಎಸೆತಗಳಲ್ಲಿ 58 ರನ್ ಗಳಿಸಿದ್ದು ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.