ADVERTISEMENT

2023ರ ಹಿನ್ನೋಟ | ವರ್ಷದಲ್ಲಿ 10 ಶತಕ; ಮತ್ತೆ ಸದ್ದು ಮಾಡುತ್ತಿದೆ ಕೊಹ್ಲಿ ಬ್ಯಾಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2023, 12:25 IST
Last Updated 22 ಡಿಸೆಂಬರ್ 2023, 12:25 IST
<div class="paragraphs"><p>ವಿರಾಟ್ ಕೊಹ್ಲಿ&nbsp;</p></div>

ವಿರಾಟ್ ಕೊಹ್ಲಿ 

   

ಪಿಟಿಐ ಚಿತ್ರ

ಭಾರತ ಕ್ರಿಕೆಟ್‌ ತಂಡದ ಪಾಲಿಗೆ ದಶಕದಿಂದಲೂ 'ರನ್‌ ಮಷಿನ್‌' ಎನಿಸಿಕೊಂಡಿರುವ ವಿರಾಟ್‌ ಕೊಹ್ಲಿ ಅವರ ವೃತ್ತಿ ಬದುಕಿಗೆ 2023ರಲ್ಲಿ ದೊಡ್ಡ ತಿರುವು ಸಿಕ್ಕಿದೆ. 2022ರ ವರ್ಷಾಂತ್ಯದ ವರೆಗೆ ಹಿಂದಿನ ಎರಡೂವರೆ ವರ್ಷ ಶತಕದ ಬರ ಅನುಭವಿಸಿದ್ದ ಅವರು, ಈ ವರ್ಷ ಬರೋಬ್ಬರಿ 10 ಶತಕ ಸಿಡಿಸಿ ತಮ್ಮ ಹಳೇ ಲಯಕ್ಕೆ ಮರಳಿದ್ದಾರೆ.

ADVERTISEMENT

ಫಾರ್ಮ್‌ ಕಳೆದುಕೊಂಡಾಗ ಟೀಕಿಸಿದ್ದವರಿಗೆ, ಟೀಂ ಇಂಡಿಯಾದಲ್ಲಿ ಸ್ಥಾನ ನೀಡುವ ಬಗ್ಗೆ ಪ್ರಶ್ನೆ ಮಾಡಿದ್ದವರಿಗೆ, 'ಕೊಹ್ಲಿ ಎಂಬ ಕುದುರೆ ಶೀಘ್ರದಲ್ಲೇ ಓಟ ನಿಲ್ಲಿಸಲಿದೆ' ಎಂದು ಭವಿಷ್ಯ ನುಡಿದಿದ್ದವರಿಗೆ ತಮ್ಮ ಬ್ಯಾಟ್‌ ಮೂಲಕವೇ ಉತ್ತರಿಸಿದ್ದಾರೆ.

2023ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಿಂದ, ವರ್ಷಾಂತ್ಯದಲ್ಲಿ ಮುಗಿದ ವಿಶ್ವಕಪ್‌ವರೆಗೂ ಕೊಹ್ಲಿ ನಿರಂತರವಾಗಿ ರನ್‌ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 25 ಸಾವಿರ ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡದ್ದರಿಂದ ಆರಂಭವಾದ ರನ್‌ ಜರ್ನಿ, ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಬಾರಿಸಿದ ಏಕೈಕ ಕ್ರಿಕೆಟಿಗ ಎನಿಸಿಕೊಳ್ಳುವವರೆಗೆ ಸಾಗಿದೆ. ಹಾಗಾಗಿ 2023 ಅನ್ನು ಕೊಹ್ಲಿ ವೃತ್ತಿ ಜೀವನದ ಎರಡನೇ ಇನಿಂಗ್ಸ್‌ಗೆ ಅನುವುಮಾಡಿಕೊಟ್ಟ ವರ್ಷ ಎನ್ನಬಹುದು.

ವಿರಾಟ್ ಕೊಹ್ಲಿ

1019 ದಿನಗಳು; 26 ಅರ್ಧಶತಕ, 0 ಶತಕ
ಬಾಂಗ್ಲಾದೇಶ ವಿರುದ್ಧ 2019ರ ನವೆಂಬರ್‌ 22ರಂದು ಕೋಲ್ಕತ್ತದಲ್ಲಿ ನಡೆದ ಹಗಲು–ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಶತಕ (136 ರನ್‌) ಗಳಿಸಿದ್ದ ಕೊಹ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ವೇಗವಾಗಿ 70 ಶತಕ ಗಳಿಸಿದ ಬ್ಯಾಟರ್‌ ಎನಿಸಿದ್ದರು. ಆದರೆ, ಮತ್ತೆ ನೂರರ ಸಂಭ್ರಮ ಆಚರಿಸಲು ಕೊಹ್ಲಿಗೆ ಬರೋಬ್ಬರಿ 1019 ದಿನಗಳೇ ಬೇಕಾದವು.

ಆ ಅವಧಿಯಲ್ಲಿ ಅವರು ಮೂರೂ ಮಾದರಿಯಲ್ಲಿ ಆಡಿದ 83 ಇನಿಂಗ್ಸ್‌ಗಳಲ್ಲಿ 26 ಅರ್ಧಶತಕ ಬಾರಿಸಿದ್ದರು. 18 ಟೆಸ್ಟ್‌ ಪಂದ್ಯಗಳ 32 ಇನಿಂಗ್ಸ್‌ಗಳಿಂದ 872 ರನ್‌, 23 ಏಕದಿನ ಪಂದ್ಯಗಳ 23 ಇನಿಂಗ್ಸ್‌ಗಳಿಂದ 824 ರನ್‌ ಹಾಗೂ 31 ಟಿ20 ಪಂದ್ಯಗಳ 28 ಇನಿಂಗ್ಸ್‌ಗಳಿಂದ 1,012 ರನ್‌ ಕಲೆಹಾಕಿದ್ದರಾದರೂ ಒಮ್ಮೆಯೂ ಮೂರಂಕಿ ಮುಟ್ಟಿರಲಿಲ್ಲ.

ಅದೇ ಸಮಯದಲ್ಲಿ (2020–2022ರ ವರೆಗೆ) ಐಪಿಎಲ್‌ನಲ್ಲಿ 46 ಇನಿಂಗ್ಸ್‌ಗಳಲ್ಲಿ ಆಡಿ, 1,212 ರನ್‌ ಗಳಿಸಿದ್ದರೂ ಶತಕ ಸಿಡಿಸಲಾಗಿರಲಿಲ್ಲ.

ಅವರ ಶತಕದ ಬರ ನೀಗಿದ್ದು 2022ರ ಸೆಪ್ಟೆಂಬರ್‌ನಲ್ಲಿ. ಏಷ್ಯಾ ಕಪ್‌ ಟಿ20 ಟೂರ್ನಿಯ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಜೇಯ 122 ರನ್‌ ಗಳಿಸುವುದರೊಂದಿಗೆ 'ಮೂರಂಕಿ'ಯ ಕಗ್ಗಂಟನ್ನು ಬಿಡಿಸಿಕೊಂಡಿದ್ದರು. ಅದಾದ ಬಳಿಕ ಹಳೇ ಲಯಕ್ಕೆ ಮರಳಿದ್ದಾರೆ.

71ನೇ ಶತಕ ಗಳಿಸಿದ ಇನಿಂಗ್ಸ್‌ ನಂತರ ಮೂರೂ ಮಾದರಿಗಳಲ್ಲಿ ಆಡಿರುವ 49 ಇನಿಂಗ್ಸ್‌ಗಳಲ್ಲಿ ಒಟ್ಟು 15 ಅರ್ಧಶತಕ ಮತ್ತು 10 ಶತಕ ಸಹಿತ 2,652 ರನ್‌ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

2023ರಲ್ಲಿ ಕೊಹ್ಲಿ ಸಾಧನೆ
ಈ ವರ್ಷ ಏಕದಿನ, ಟೆಸ್ಟ್ ಹಾಗೂ ಐಪಿಎಲ್‌ನಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ಕೊಹ್ಲಿ, ಎಂದಿನಂತೆ ರನ್‌ ಗಳಿಸುತ್ತಿದ್ದಾರೆ. ಮೇಲಿಂದ ಮೇಲೆ ಶತಕ ಸಿಡಿಸುವ ಮೂಲಕ ಅವರ ಬ್ಯಾಟ್‌ ಮತ್ತೆ ಸದ್ದು ಮಾಡುತ್ತಿದೆ.

ಆಡಿರುವ 27 ಏಕದಿನ ಪಂದ್ಯಗಳ 24 ಇನಿಂಗ್ಸ್‌ಗಳಲ್ಲಿ, 6 ಶತಕ ಮತ್ತು 8 ಅರ್ಧಶತಕ ಸಹಿತ 1,377 ರನ್‌ ಕಲೆಹಾಕಿರುವ ಕೊಹ್ಲಿ, ಟೆಸ್ಟ್ ಮಾದರಿಯ 7 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 2 ಶತಕ ಮತ್ತು 1 ಅರ್ಧಶತಕ ಸಹಿತ 557 ರನ್‌ ಗಳಿಸಿದ್ದಾರೆ. ಐಪಿಎಲ್‌ನಲ್ಲೂ ಎರಡು ಶತಕ ಸಿಡಿಸಿ ಮಿಂಚಿದ್ದಾರೆ. ಅಷ್ಟೇ ಅಲ್ಲ. ಈ ವರ್ಷ ಕೊಹ್ಲಿ ಬ್ಯಾಟ್‌ನಿಂದ ಮೂಡಿಬಂದ ದಾಖಲೆಗಳ ಮಾಹಿತಿ ಇಲ್ಲಿದೆ.

ಈ ವರ್ಷ ಗಳಿಸಿದ ರನ್‌

  • ಏಕದಿನ: 27 ಪಂದ್ಯಗಳ 24 ಇನಿಂಗ್ಸ್‌ಗಳಲ್ಲಿ 1,377 ರನ್‌

  • ಟೆಸ್ಟ್: 7 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 2 557 ರನ್‌

  • ಐಪಿಎಲ್‌: 14 ಪಂದ್ಯಗಳಲ್ಲಿ 639 ರನ್‌

ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ
ಈ ಬಾರಿಯ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಶತಕ ಸಿಡಿಸಿದ ಕೊಹ್ಲಿ, ಈ ಮಾದರಿಯಲ್ಲಿ 50 ಶತಕ ಸಿಡಿಸಿದ ಏಕೈಕ ಬ್ಯಾಟರ್‌ ಎನಿಸಿಕೊಂಡರು. ಅದರೊಂದಿಗೆ ಅವರು, ಶತಕ ಗಳಿಕೆ ಪಟ್ಟಿಯಲ್ಲಿ ದಶಕದಿಂದಲೂ ಅಗ್ರಸ್ಥಾನವನ್ನು ಆಕ್ರಮಿಸಿಕೊಂಡಿದ್ದ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ (49 ಶತಕ) ಅವರನ್ನು ಎರಡನೇ ಸ್ಥಾನಕ್ಕೆ ನೂಕಿದರು.

ವಿರಾಟ್ ಕೊಹ್ಲಿ

ವಿಶ್ವಕಪ್‌ ಟೂರ್ನಿಯೊಂದರಲ್ಲಿ ಅಧಿಕ ರನ್‌
ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿದ ಕಿಂಗ್‌ ಕೊಹ್ಲಿ, ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಟೂರ್ನಿಯ 'ಶ್ರೇಷ್ಠ ಆಟಗಾರ' ಪ್ರಶಸ್ತಿ ಬಾಚಿಕೊಂಡರು.

ಆಡಿದ 11 ಇನಿಂಗ್ಸ್‌ಗಳಲ್ಲಿ ಮೂರು ಶತಕ ಮತ್ತು 6 ಅರ್ಧಶತಕ ಗಳಿಸಿದ್ದಷ್ಟೇ ಅಲ್ಲದೆ, 95.62ರ ಸರಾಸರಿಯಲ್ಲಿ ಬರೋಬ್ಬರಿ 765 ರನ್‌ ಕಲೆಹಾಕಿದರು. ಇದರೊಂದಿಗೆ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ಸಾಧನೆ ಮಾಡಿದರು. ಸಚಿನ್‌ ಅವರು 2003ರಲ್ಲಿ 673 ರನ್‌ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಅತಿಹೆಚ್ಚು ಅರ್ಧಶತಕ
ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್‌, ಫೈನಲ್‌ ಎರಡರಲ್ಲೂ ಅರ್ಧಶತಕಕ್ಕಿಂತ ಹೆಚ್ಚು ರನ್‌ ಗಳಿಸಿದ ಮೊದಲ ಭಾರತೀಯ ಎಂಬ ಶ್ರೇಯ ಕೊಹ್ಲಿಯದ್ದಾಯಿತು. ಅದರೊಟ್ಟಿಗೆ ಅವರು, ಒಂದೇ ಟೂರ್ನಿಯಲ್ಲಿ 9 ಬಾರಿ 50ಕ್ಕಿಂತ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ವಿಶ್ವ ದಾಖಲೆಯನ್ನೂ ಬರೆದರು.

ಸಚಿನ್‌ 2003ರಲ್ಲಿ ಮತ್ತು ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ 2019ರಲ್ಲಿ ತಲಾ 8 ಬಾರಿ ಈ ಸಾಧನೆ ಮಾಡಿದ್ದರು.

ವಿರಾಟ್ ಕೊಹ್ಲಿ

ವೇಗದ 13 ಸಾವಿರ ರನ್‌
ಏಕದಿನ ಮಾದರಿಯಲ್ಲಿ ಇದುವರೆಗೆ 292 ಪಂದ್ಯಗಳ 280 ಇನಿಂಗ್ಸ್‌ಗಳಲ್ಲಿ ಆಡಿರುವ ಕೊಹ್ಲಿ, 13,848 ರನ್‌ ಗಳಿಸಿದ್ದಾರೆ. ಇದೇ ವರ್ಷ ನಡೆದ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಶತಕ ಸಿಡಿಸುವುದರೊಂದಿಗೆ 267ನೇ ಇನಿಂಗ್ಸ್‌ನಲ್ಲಿ 13 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದರು. ಅವರ ಖಾತೆಯಲ್ಲಿ ಸದ್ಯ 50 ಶತಕ ಮತ್ತು 72 ಅರ್ಧಶತಕಗಳು ಇವೆ.

321 ಇನಿಂಗ್ಸ್‌ಗಳಲ್ಲಿ 13 ಸಾವಿರ ರನ್ ಗಡಿ ದಾಟಿದ್ದ ಸಚಿನ್‌ ಅವರು ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ.

ವೇಗವಾಗಿ 25,000 ರನ್‌
ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಆಡಿದ 549ನೇ ಇನಿಂಗ್ಸ್‌ನಲ್ಲಿ 25 ಸಾವಿರ ರನ್‌ ಗಳಿಸಿದ ಕೊಹ್ಲಿ, 567ನೇ ಇನಿಂಗ್ಸ್‌ನಲ್ಲಿ 26 ಸಾವಿರ ರನ್‌ ಕಲೆಹಾಕಿದರು. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟರ್‌ ಎಂಬ ಖ್ಯಾತಿಯನ್ನು ಈ ವರ್ಷ ಪಡೆದುಕೊಂಡರು. ಸಚಿನ್‌ ಅವರು ಕ್ರಮವಾಗಿ 577 ಮತ್ತು 600ನೇ ಇನಿಂಗ್ಸ್‌ನಲ್ಲಿ ಇಷ್ಟು ರನ್ ಗಳಿಸಿ ಸಾಧನೆ ಮಾಡಿದ್ದರು.

ಹೆಚ್ಚು ಸಲ ಸಾವಿರ ರನ್‌
ಏಕದಿನ ಮಾದರಿಯಲ್ಲಿ ಈ ವರ್ಷ 1,377 ರನ್‌ ಗಳಿಸಿರುವ ಕೊಹ್ಲಿ, ಕ್ಯಾಲೆಂಡರ್ ವರ್ಷವೊಂದರಲ್ಲಿ ಹೆಚ್ಚು ಸಲ ಸಾವಿರಕ್ಕಿಂತ ಅಧಿಕ ರನ್ ಗಳಿಸಿದ ದಾಖಲೆ ಬರೆದರು. ಕೊಹ್ಲಿ 8 ಸಲ ಮತ್ತು ಸಚಿನ್‌ 7 ಬಾರಿ ಇಷ್ಟು ರನ್‌ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

ಐಪಿಎಲ್‌ನಲ್ಲಿ ಹೆಚ್ಚು ಶತಕ
ಈ ವರ್ಷ ಮಾರ್ಚ್‌ ತಿಂಗಳಲ್ಲಿ ಆರಂಭವಾಗಿ ಮೇ ವರೆಗೆ ನಡೆದ ಐಪಿಎಲ್‌ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದ ಕೊಹ್ಲಿ, ಎರಡು ಶತಕಗಳನ್ನೂ ಸಿಡಿಸಿದರು. ಆ ಮೂಲಕ ಚುಟುಕು ಕ್ರಿಕೆಟ್‌ ಲೀಗ್‌ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ ಎಂಬ ಸಾಧನೆ ಮಾಡಿದರು.

ಆರ್‌ಸಿಬಿ ಪರ 237 ಪಂದ್ಯಗಳಲ್ಲಿ ಆಡಿರುವ ಕೊಹ್ಲಿ, ಏಳು ಬಾರಿ ಮೂರಂಕಿ ದಾಟಿದ್ದಾರೆ. ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ (6) ಮತ್ತು ಇಂಗ್ಲೆಂಡ್‌ನ ಜಾಸ್‌ ಬಟ್ಲರ್‌ (5) ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಇದ್ದಾರೆ.

2023ರ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ ಕಣಕ್ಕಿಳಿದ ಕೊಹ್ಲಿ, 6 ಅರ್ಧಶತಕವನ್ನೂ ಸಿಡಿಸಿ 639 ರನ್‌ ಗಳಿಸಿದರು. ಅದರೊಂದಿಗೆ ಈ ಲೀಗ್‌ನಲ್ಲಿ ಏಳು ಸಹಸ್ರ ರನ್‌ ಗಳಿಸಿದ ಏಕೈಕ ಬ್ಯಾಟರ್‌ ಎಂಬ ದಾಖಲೆಯನ್ನೂ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.