ಲಂಡನ್: ಹಾಲಿ ಆ್ಯಷಸ್ ಸರಣಿಯ ನಂತರ ನಿವೃತ್ತಿಯ ಬಗ್ಗೆ ಯೋಚನೆ ಮಾಡಿಲ್ಲ ಎಂದು ಇಂಗ್ಲೆಂಡ್ ತಂಡದ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ. ‘ತಂಡಕ್ಕೆ ಇನ್ನೂ ಹೆಚ್ಚಿನದನ್ನು ಕೊಡಬೇಕಾಗಿದೆ’ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಪರ ಟೆಸ್ಟ್‌ನಲ್ಲಿ ಸರ್ವಾಧಿಕ, 690 ವಿಕೆಟ್‌ಗಳನ್ನು ಪಡೆದಿರುವ ಆ್ಯಂಡರ್ಸನ್ ಅವರು ಭಾನುವಾರ 41ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಆ್ಯಷಸ್ ಸರಣಿಯಲ್ಲಿ ಐದು ವಿಕೆಟ್‌ಗಳನ್ನಷ್ಟೇ ಪಡೆದಿದ್ದರೂ, ತಾವು ಅಷ್ಟೇನೂ ಕಳಪೆಯಾಗಿ ಬೌಲಿಂಗ್ ಮಾಡುತ್ತಿಲ್ಲ ಎಂಬುದು ಅವರ ಅನಿಸಿಕೆ.
‘ನಾನು ಕೆಟ್ಟದಾಗೇನೂ ಬೌಲಿಂಗ್ ಮಾಡುತ್ತಿಲ್ಲ, ನನ್ನ ವೇಗವೂ ಕಡಿಮೆಯಾಗಿಲ್ಲ, ಮೊನಚೂ ಉಳಿದಿದೆ. ನಾನು ತಂಡಕ್ಕೆ ಇನ್ನೂ ಹೆಚ್ಚಿನದನ್ನು ಕೊಡಬಲ್ಲೆ ಎಂಬುದು ನನ್ನ ಭಾವನೆ’ ಎಂದು ಅವರು ಹೇಳಿದ್ದಾರೆ. ಎರಡನೇ ದಿನದಾಟ ಮುಗಿದ ನಂತರ ಅವರು ಬಿಬಿಸಿ ಜೊತೆ ಮಾತನಾಡುವಾಗ ಈ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನ ಉತ್ತಮವಾಗಿ ಬೌಲ್ ಮಾಡಿದ್ದರೂ, ಒಂದು ವಿಕೆಟ್ (ಮಿಚೆಲ್ ಮಾರ್ಷ್) ಮಾತ್ರ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.