ADVERTISEMENT

Sri Lanka vs England| ಆರು ವಿಕೆಟ್‌ ಉರುಳಿಸಿದ ಜೇಮ್ಸ್‌ ಆ್ಯಂಡರ್ಸನ್‌

ಎರಡನೇ ಟೆಸ್ಟ್ ಪಂದ್ಯ: ಶ್ರೀಲಂಕಾದ ದಿಲ್ರುವಾನ್ ಪೆರೇರಗೆ ಅರ್ಧಶತಕ; ಶತಕ ವಂಚಿತ ನಿರೋಷನ್‌

ಏಜೆನ್ಸೀಸ್
Published 23 ಜನವರಿ 2021, 15:10 IST
Last Updated 23 ಜನವರಿ 2021, 15:10 IST
ಜೇಮ್ಸ್ ಆ್ಯಂಡರ್ಸನ್ –ರಾಯಿಟರ್ಸ್ ಚಿತ್ರ
ಜೇಮ್ಸ್ ಆ್ಯಂಡರ್ಸನ್ –ರಾಯಿಟರ್ಸ್ ಚಿತ್ರ   

ಗಾಲ್: ವೇಗಿ ಜೇಮ್ಸ್ ಆ್ಯಂಡರ್ಸನ್ ಏಷ್ಯಾದಲ್ಲಿ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿ ಮೆರೆದರು. 40 ರನ್‌ ನೀಡಿ ಆರು ವಿಕೆಟ್ ಕಬಳಿಸಿದ ಅವರು ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಆದರೂ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ಆತಿಥೇಯರು ಯಶಸ್ವಿಯಾದರು.

ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಶ್ರೀಲಂಕಾವನ್ನು 381 ರನ್‌ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್‌ ತಂಡ ದಿನದಾಟದ ಮುಕ್ತಾಯದ ವೇಳೆ ಎರಡು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದ್ದು ಉತ್ತಮ ಮೊತ್ತ ಕಲೆಹಾಕುವ ಭರವಸೆ ಮೂಡಿಸಿದೆ.

ಲಸಿತ್ ಎಂಬುಲ್ಡೇನಿಯಾ ಸತತ ಎರಡು ಓವರ್‌ಗಳಲ್ಲಿ ಇಂಗ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾಕ್ ಕ್ರಾವ್ಲಿ ಮತ್ತು ಡಾಮ್ ಸಿಬ್ಲಿ ಅವರ ವಿಕೆಟ್ ಉರುಳಿಸಿದರು. ಈ ಸಂದರ್ಭದಲ್ಲಿ ತಂಡದ ಮೊತ್ತ ಕೇವಲ ಐದು ರನ್‌ ಆಗಿತ್ತು. ನಂತರ ಜಾನಿ ಬೇಸ್ಟೊ ಮತ್ತು ನಾಯಕ ಜೋ ರೂಟ್ ಕ್ರೀಸ್‌ನಲ್ಲಿ ತಳವೂರಿ ಲಂಕಾ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. ಮೂರನೇ ವಿಕೆಟ್‌ಗೆ ಅವರಿಬ್ಬರು 93 ರನ್‌ಗಳ ಜೊತೆಯಾಟ ಆಡಿದರು.

ADVERTISEMENT

ಮೊದಲ ದಿನ ಅಗ್ರ ಕ್ರಮಾಂಕದ ಮೂವರನ್ನೂ ವಾಪಸ್ ಕಳುಹಿಸಿದ್ದ ಆ್ಯಂಡರ್ಸನ್, ಶತಕ ಗಳಿಸಿದ್ದ ಏಂಜೆಲೊ ಮ್ಯಾಥ್ಯೂಸ್ (110; 238 ಎಸೆತ, 11 ಬೌಂಡರಿ) ಅವರ ವಿಕೆಟನ್ನು ಶನಿವಾರ ಬೆಳಿಗ್ಗೆ ಉರುಳಿಸಿದರು. ಮ್ಯಾಥ್ಯೂಸ್ ಮೊದಲ ದಿನದ ಮೊತ್ತಕ್ಕೆ ಕೇವಲ ಮೂರು ರನ್ ಸೇರಿಸಿ ವಾಪಸಾದರು. ಶತಕದತ್ತ ಹೆಜ್ಜೆ ಹಾಕಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ನಿರೋಷನ್ ಡಿಕ್ವೆಲಾ (92; 144 ಎ, 10 ಬೌಂ) ಅವರನ್ನು ಔಟ್ ಮಾಡುವ ಮೂಲಕ ಐದು ವಿಕೆಟ್‌ಗಳ ಗೊಂಚಲು ತಮ್ಮದಾಗಿಸಿಕೊಂಡರು. ಇದು ಒಟ್ಟಾರೆ ಅವರು ಗಳಿಸಿದ 30ನೇ ಐದು ವಿಕೆಟ್ ಗೊಂಚಲಾಗಿದ್ದು ಶ್ರೀಲಂಕಾದಲ್ಲಿ ಎರಡನೆಯದಾಗಿದೆ. ಏಷ್ಯಾದಲ್ಲಿ ಅವರ ಈ ಹಿಂದಿನ ಗರಿಷ್ಠ ಸಾಧನೆ 75ಕ್ಕೆ5 ವಿಕೆಟ್ ಆಗಿತ್ತು. ಅದನ್ನು ಅವರು ಗಾಲ್‌ನಲ್ಲಿ 2012ರಲ್ಲಿ ಗಳಿಸಿದ್ದರು.

ಸ್ಟುವರ್ಟ್ ಬ್ರಾಡ್ ಬದಲಿಗೆ ಈ ಪಂದ್ಯದಲ್ಲಿ ಸ್ಥಾನ ಗಳಿಸಿರುವ ಆ್ಯಂಡರ್ಸನ್ ಒಟ್ಟು 29 ಓವರ್ ಬೌಲ್ ಮಾಡಿದರು. 13 ಓವರ್ ಮೇಡನ್ ಆದವು. ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ದಿಲ್ರುವಾನ್ ಪೆರೇರ (67; 170 ಎ, 8 ಬೌಂ, 1 ಸಿಕ್ಸರ್) ಅವರು ಅಮೋಘ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. ಹೀಗಾಗಿ ಶ್ರೀಲಂಕಾದ ಮೊತ್ತ 350 ದಾಟಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಶ್ರೀಲಂಕಾ (ಶುಕ್ರವಾರದ ಅಂತ್ಯಕ್ಕೆ 4ಕ್ಕೆ 229): 139.3 ಓವರ್‌ಗಳಲ್ಲಿ 381 (ಏಂಜೆಲೊ ಮ್ಯಾಥ್ಯೂಸ್ 110, ನಿರೋಷನ್ ಡಿಕ್ವೆಲಾ 92, ದಿಲ್ರುವಾನ್ ಪೆರೇರ 67; ಜೇಮ್ಸ್ ಆ್ಯಂಡರ್ಸನ್‌ 40ಕ್ಕೆ6, ಸ್ಯಾಮ್ ಕರನ್ 60ಕ್ಕೆ1, ಮಾರ್ಕ್ ವುಡ್ 84ಕ್ಕೆ3); ಇಂಗ್ಲೆಂಡ್‌: 30 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 98 (ಜಾನಿ ಬೇಸ್ಟೊ ಬ್ಯಾಟಿಂಗ್ 24, ಜೋ ರೂಟ್ ಬ್ಯಾಟಿಂಗ್ 67; ಲಸಿತ್ ಎಂಬುಲ್ಡೇನಿಯಾ 33ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.