ಬೆಂಗಳೂರು: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆ್ಯಂಡ್ರ್ಯೂ ಸೈಮಂಡ್ಸ್ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ ಭಾರತದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಹೃತ್ಪೂರ್ವಕ ಸಂತಾಪಗಳನ್ನು ಸೂಚಿಸಿದ್ದಾರೆ.
'ಆ್ಯಂಡ್ರ್ಯೂ ಸೈಮಂಡ್ಸ್ ಅವರ ಹಠಾತ್ ಸಾವು ಆಘಾತವನ್ನುಂಟು ಮಾಡಿತು. ಬಹಳ ಬೇಗನೆ ಹೋದರು. ಅವರ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ಹೃತ್ಪೂರ್ವಕ ಸಂತಾಪಗಳು. ಅಗಲಿದ ಆತ್ಮಕ್ಕೆ ಪ್ರಾರ್ಥನೆಗಳು, ಶಾಂತಿ ಸಿಗಲಿ' ಎಂದು ಹರಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸೈಮಂಡ್ಸ್ ಸಾವಿಗೆ ಹರಭಜನ್ ಸಿಂಗ್ ಸಂತಾಪಗಳನ್ನು ಸೂಚಿಸಿದ ಬೆನ್ನಲ್ಲೇ 2008ರಲ್ಲಿ ನಡೆದಿದ್ದ ಮಂಕಿಗೇಟ್ ಪ್ರಕರಣವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೆದಕಿದ್ದಾರೆ.
2008ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್ ಅವರಿಗೆ ಹರಭಜನ್ ಸಿಂಗ್ ‘ಮಂಕಿ’ ಎಂದು ಬೈದಿದ್ದರು ಎಂದು ಆಸ್ಟ್ರೇಲಿಯಾ ತಂಡವು ದೂರಿತ್ತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಮಂಕಿಗೇಟ್ ವಿವಾದವೆಂದೇ ಹೆಸರಾಯಿತು. ಜನಾಂಗೀಯ ನಿಂದನೆಯ ತಿರುವು ಪಡೆದಿತ್ತು. ಆಗ ಭಾರತ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಐಸಿಸಿಯು ಹರಭಜನ್, ಸೈಮಂಡ್ಸ್ ಅವರನ್ನು ವಿಚಾರಣೆ ಮಾಡಿತ್ತು. ಹರಭಜನ್ ನಿಷೇಧ ಶಿಕ್ಷೆಯನ್ನೂ ಅನುಭವಿಸಬೇಕಾಯಿತು.
‘ಪ್ರಕರಣದ ಕುರಿತು ಕ್ಷಮೆ ಕೇಳುವಾಗ ಭಜ್ಜಿ ಅತ್ತಿದ್ದರು’ ಎಂದು ಈಚೆಗೆ ಸೈಮಂಡ್ಸ್ ಹೇಳಿಕೆ ನೀಡಿದ್ದರು. ನಂತರ ಅದನ್ನು ಭಜ್ಜಿ ಅಲ್ಲಗಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.