ADVERTISEMENT

ವೈಶಾಖ, ಯಶ್, ರಮಣದೀಪ್ ಬಗ್ಗೆ ಅನಿಲ್ ಕುಂಬ್ಳೆ ಮೆಚ್ಚುಗೆ

ಪಿಟಿಐ
Published 6 ನವೆಂಬರ್ 2024, 16:08 IST
Last Updated 6 ನವೆಂಬರ್ 2024, 16:08 IST
ವೈಶಾಖ ವಿಜಯಕುಮಾರ್
ವೈಶಾಖ ವಿಜಯಕುಮಾರ್   

ಮುಂಬೈ: ಯಶ್ ದಯಾಳ್, ವೈಶಾಖ ವಿಜಯಕುಮಾರ್ ಮತ್ತು ರಮಣದೀಪ್ ಸಿಂಗ್ ಅವರು ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಕಠಿಣ ಶ್ರಮವನ್ನು ಗುರುತಿಸಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಅವಕಾಶಗಳನ್ನು ನೀಡಬೇಕು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ. 

ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಯುವ ತಂಡವು ಇದೇ ಶುಕ್ರವಾರದಿಂದ ದಕ್ಷಿಣ ಆಫ್ರಿಕಾದಲ್ಲಿ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಈ ಬಳಗಕ್ಕೆ ವಿವಿಎಸ್ ಲಕ್ಷ್ಮಣ್ ಅವರು ಹಂಗಾಮಿ ಕೋಚ್ ಆಗಿದ್ದಾರೆ. 

‘ಈ ಮೂವರು ಪ್ರತಿಭಾನ್ವಿತರಿಗೆ ತಮ್ಮ ಸಾಮರ್ಥ್ಯಕ್ಕೆ  ತಕ್ಕ ಅವಕಾಶವನ್ನು ಭಾರತ ತಂಡವು ನೀಡುವ ವಿಶ್ವಾಸ ನನಗಿದೆ. ಏಕೆಂದರೆ ಅವರೆಲ್ಲರೂ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಕುಂಬ್ಳೆ ಅವರು ಜಿಯೊ ಸಿನೆಮಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 

ADVERTISEMENT

‘ಐಪಿಎಲ್‌ ಟೂರ್ನಿಯ ಪಂದ್ಯವೊಂದರಲ್ಲಿ ಯಶ್ ದಯಾಳ್ ಅವರ ಒಂದೇ ಓವರ್‌ನಲ್ಲಿ ‌ ರಿಂಕು ಸಿಂಗ್  ಐದು ಸಿಕ್ಸರ್ ಸಿಡಿಸಿದ್ದರು. ಅದರ ನಂತರವೂ ಯಶ್ ಅವರು ಲಯಕ್ಕೆ ಮರಳಿದರು. ಇದು ಅವರ ಛಲ ಮತ್ತು ಗಟ್ಟಿತನವನ್ನು ತೋರಿಸುತ್ತದೆ. ಅವರಿಂದ ಉತ್ತಮವಾದದ್ದನ್ನು ನಿರೀಕ್ಷಿಸಬಹುದು’ ಎಂದು ಕುಂಬ್ಳೆ ಹೇಳಿದ್ದಾರೆ.

‘ವೈಶಾಖ ನಿಜಕ್ಕೂ ಉತ್ತಮ ಆಟಗಾರ. ದೇಶಿ ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಅವರಿಗೆ ಹೆಚ್ಚು ಅವಕಾಶಗಳು ಸಿಗದಿರುವುದು ದುರದೃಷ್ಟಕರ. ಅವರನ್ನು ತಂಡವು ರಿಟೇನ್ ಮಾಡದೇ ಇರುವುದು ಕೂಡ ನನಗೆ ಅಚ್ಚರಿ ಮೂಡಿಸಿದೆ. ರಮಣದೀಪ್ ಸಿಂಗ್ ಅವರು ಐಪಿಎಲ್‌ನಲ್ಲಿ ಉತ್ತಮ ಬ್ಯಾಟರ್. ಒಂದು ಓವರ್‌ನಲ್ಲಿ ಮೂರ್ನಾಲ್ಕು ಎಸೆತಗಳನ್ನು ದಿಟ್ಟವಾಗಿ ಹೊಡೆಯುವ ಸಾಮರ್ಥ್ಯವಿರುವ ಆಟಗಾರ’ ಎಂದು ಕುಂಬ್ಳೆ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.