ಲಂಡನ್: ಹೋದ ವರ್ಷ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಆ ಸಂದರ್ಭದಲ್ಲಿತಮಗೆ ನೀಡಲಾಗಿದ್ದ ಚಿನ್ನದ ಪದಕವು ಮನೆ ಬದಲಾಯಿಸುವಾಗ ಕಳೆದುಹೋಗಿದೆ ಎಂದು ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.
‘ಲಾಕ್‌ಡೌನ್‌ಗಿಂತ ಮೊದಲು ಮನೆ ಬದಲಾಯಿಸಿದೆ. ಮೊದಲಿದ್ದ ಮನೆಯ ಗೋಡೆಯ ಮೇಲಿದ್ದ ಚಿತ್ರವೊಂದರ ಮೇಲೆ ಪದಕವನ್ನು ನೇತುಹಾಕಿದ್ದೆ. ಆದರೆ, ನಾನು ಬೇರೆ ಮನೆಪ್ರವೇಶಿಸಿದ ನಂತರ ಸರಂಜಾಮುಗಳನ್ನು ಹೊಂದಿಸುವಾಗಲೇ ಪದಕ ಇಲ್ಲದಿರುವುದು ಗಮನಕ್ಕೆ ಬಂತು. ಮರಳಿ ಆ ಮನೆಗೆ ಹೋಗಿ ನೋಡಿದೆ. ಪೋಸ್ಟರ್ ಇತ್ತು. ಪದಕ ಇರಲಿಲ್ಲ. ಒಂದು ವಾರವಿಡೀ ಎರಡೂ ಮನೆಯನ್ನು ಜಾಲಾಡಿದೆ’ ಎಂದು ಜೋಫ್ರಾ ಬಿಬಿಸಿ ರೇಡಿಯೊಗೆ ತಿಳಿಸಿದ್ದಾರೆ.
‘ಪದಕ ಕಳೆದುಹೋಗಿರುವುದರಿಂದ ಒಂದು ರೀತಿ ಹುಚ್ಚು ಹಿಡಿದಂತಾಗಿದೆ. ಗೃಹಬಂಧನದಲ್ಲಿರುವುದರಿಂದ ಹೊರಗೆ ಹೋಗಿ ಹುಡುಕಲು ಆಗುತ್ತಿಲ್ಲ. ಈ ಮನೆಯಲ್ಲಿ ಎಷ್ಟು ಹುಡುಕಿದರೂ ಸಿಗುತ್ತಿಲ್ಲ’ ಎಂದು ಬಾರ್ಬಡಿಸ್ ಮೂಲದ ಜೋಫ್ರಾ ಹೇಳಿದ್ದಾರೆ.
ಇಂಗ್ಲೆಂಡ್ ತಂಡವು ಮೊದಲ ಸಲ ವಿಶ್ವಕಪ್ ಜಯಿಸುವಲ್ಲಿ ಜೋಫ್ರಾ ಅವರ ಬೌಲಿಂಗ್ ಕೂಡ ಪ್ರಮುಖ ಪಾತ್ರ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.