ADVERTISEMENT

ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಜೋಫ್ರಾ ಆರ್ಚರ್‌ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 15:56 IST
Last Updated 21 ಜುಲೈ 2020, 15:56 IST
ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್   

ಮ್ಯಾಂಚೆಸ್ಟರ್ (ಎಪಿ): ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಸೋಮವಾರ ಮುಕ್ತಾಯವಾದ ಎರಡನೇ ಟೆಸ್ಟ್‌ನಲ್ಲಿ ಅವರು ಆಡಿರಲಿಲ್ಲ. ಪಂದ್ಯಕ್ಕೂ ಮುನ್ನ ಅವರು ಜೀವ ಸುರಕ್ಷತಾ ನಿಯಮವನ್ನು ಉಲ್ಲಂಘಿಸಿದ್ದರು. ಅದರಿಂದಾಗಿ ಅವರಿಗೆ ಪಂದ್ಯದಿಂದ ಕೈಬಿಡಲಾಗಿತ್ತು. ಐದು ದಿನಗಳವರೆಗೆ ಪ್ರತ್ಯೇಕವಾಸದಲ್ಲಿದ್ದರು. ಅವರಿಗೆ ದಂಡ ಕೂಡ ವಿಧಿಸಲಾಗಿತ್ತು.

ಈ ಅವಧಿಯಲ್ಲಿ ಅವರನ್ನು ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಅವರು ನೆಗೆಟಿವ್ ಆಗಿದ್ದರು. ಆದ್ದರಿಂದ ಆಡಲು ಅವಕಾಶ ಪಡೆಯಲಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಜೋಫ್ರಾ ಬದಲಿಗೆ ಸ್ಟುವರ್ಟ್ ಬ್ರಾಡ್ ಅವಕಾಶ ಪಡೆದಿದ್ದರು. ಉತ್ತಮವಾಗಿ ಬೌಲಿಂಗ್ ಕೂಡ ಮಾಡಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿತ್ತು. ಅದರಿಂದಾಗಿ ಮೂರು ಪಂದ್ಯಗಳ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿದೆ.

ADVERTISEMENT

32 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿರುವ ವೆಸ್ಟ್ ಇಂಡೀಸ್ ಬಳಗಕ್ಕೆ ಮ್ಯಾಂಚೆಸ್ಟರ್‌ನಲ್ಲಿಯೇ ನಡೆಯಲಿರುವ ಮೂರನೇ ಪಂದ್ಯ ಮಹತ್ವದ್ದಾಗಿದೆ.

’ಜೋಫ್ರಾ ತಪ್ಪು ಮಾಡಿರುವುದು ನಿಜ. ಅವರೇ ಕ್ಷಮೆ ಕೋರಿದ್ದಾರೆ. ಶಿಸ್ತು ಕ್ರಮವನ್ನೂ ಅನುಭವಿಸಿದ್ದಾರೆ. ಈಗೇನಿದ್ದರೂ ಮುಂದಿನದನ್ನು ನೋಡುವುದು ಒಳಿತು. ಸಹ ಆಟಗಾರನಾಗಿರುವ ಜೋಫ್ರಾ ಅವರ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಲು ನಾವಿದ್ದೇವೆ‘ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.