ಪರ್ತ್: ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿ ವಿದೇಶಕ್ಕೆ ಹಾರಿ ವರ್ಷಗಳು ಹತ್ತಾರು ಕಳೆದಿವೆ. ಆದರೂ ಕರ್ನಾಟಕ ಕ್ರಿಕೆಟ್‌ನ ಅಂದಿನ ‘ರಾಜ’ನ ನೆನಪುಗಳ ಇನಿಂಗ್ಸ್ ಕೊನೆಗೊಂಡಿಲ್ಲ. ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನೆಲೆಸಿರುವ ವಿಜಯ್ ಅರ್ಜುನ್ ರಾಜ ಅವರು ಕರ್ನಾಟಕಕ್ಕಾಗಿ ಆಡಿದ ಪ್ರಮುಖ ಇನಿಂಗ್ಸ್‌ಗಳನ್ನು ಈಗಲೂ ಮೆಲುಕು ಹಾಕುತ್ತಾರೆ.
ಆಸ್ಟ್ರೇಲಿಯಾದಲ್ಲಿ ಭಾರತದ ಪಂದ್ಯಗಳು ನಡೆಯುವಾಗಲೆಲ್ಲ ಹಾಜರಿರುವ ಅರ್ಜುನ್ ರಾಜ ಬೆಂಗಳೂರಿನಿಂದ ತೆರಳುವ ಪತ್ರಕರ್ತರಿಗೆ ವಿಶೇಷ ಭೋಜನ ಏರ್ಪಡಿಸುವ ‘ಸಂಪ್ರದಾಯ’ ಇರಿಸಿಕೊಂಡಿದ್ದಾರೆ. ಭೋಜನ ಕೂಟದಲ್ಲಿ ಕ್ರಿಕೆಟ್ ಜೀವನದ ರಸ ಗಳಿಗೆಗಳ ಔತಣವನ್ನೂ ಉಣಬಡಿಸುತ್ತಾರೆ.
1988ರಿಂದ 1992ರ ವರೆಗೆ ಪ್ರಥಮ ದರ್ಜೆ, 1990 ಮತ್ತು 1991ರಲ್ಲಿ ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ ಅರ್ಜುನ್ ಅವರು ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಮುಂತಾದವರೊಂದಿಗೆ ಆಡಿದ ಅನುಭವ ಹೊಂದಿದ್ದಾರೆ.
24ನೇ ವರ್ಷದಲ್ಲಿ ಏಕಾಏಕಿ ಅಂಗಣದಿಂದ ದೂರ ಉಳಿದ ರಾಜ ಕೆಲ ಕಾಲ ದುಬೈನಲ್ಲಿ ವಾಸವಾಗಿದ್ದರು. ಈಗ ಆಸ್ಟ್ರೇಲಿಯಾದ ಪ್ರಜೆಯಾಗಿದ್ದಾರೆ. 50ರ ಹರೆಯದ ಅವರು ಪತ್ನಿ ಮತ್ತು ಮಗಳೊಂದಿಗೆ ಪರ್ತ್‌ನಲ್ಲಿ ನೆಲೆಸಿದ್ದಾರೆ.
ದಾಖಲೆಯ ‘ರಾಜ’: 1991ರಲ್ಲಿ ಬಂಗಾಳ ವಿರುದ್ಧದ ಪಂದ್ಯದಲ್ಲಿ 267 ರನ್ ಗಳಿಸಿದ್ದ ರಾಜ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರ ವೈಯಕ್ತಿಕ ಅತ್ಯಧಿಕ ರನ್ ಗಳಿಸಿದ್ದ ದಾಖಲೆ ಬರೆದಿದ್ದರು. 2004ರಲ್ಲಿ ರೋಲೆಂಡ್ ಬ್ಯಾರಿಂಗ್ಟನ್ 283 ರನ್ ಗಳಿಸಿ ಈ ದಾಖಲೆಯನ್ನು ಮುರಿದಿದ್ದರು. ನಾಲ್ಕು ವರ್ಷಗಳಲ್ಲಿ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅವರು 1194 ರನ್ ಸಂಪಾದಿಸಿದ್ದರು. ಇವುಗಳಲ್ಲಿ ಎರಡು ಶತಕ ಮತ್ತು ಎಂಟು ಅರ್ಧಶತಕಗಳು ಇದ್ದವು. 1989–90ರಲ್ಲಿ ಒಟ್ಟು 642 ರನ್ ಗಳಿಸಿ, ಆ ಋತುವಿನಲ್ಲಿ ಹೆಚ್ಚು ರನ್ ಗಳಿಸಿದ ದೇಶದ ಎರಡನೇ ಆಟಗಾರ ಎಂದೆನಿಸಿಕೊಂಡಿದ್ದರು.
‘1991ರ ಇರಾನಿ ಟ್ರೋಫಿ ಟೂರ್ನಿಯಲ್ಲಿ ಉತ್ತಮವಾಗಿ ಆಡಲು ಆಗಲಿಲ್ಲ. ಇದನ್ನೇ ನೆಪವಾಗಿರಿಸಿಕೊಂಡು ಆಯ್ಕೆ ಸಮಿತಿಯವರು ನನ್ನನ್ನು ದುಲೀಪ್ ಟ್ರೋಫಿ ತಂಡದಿಂದ ಕೈಬಿಟ್ಟರು. ನನ್ನ ಹಿಂದಿನ ಸಾಧನೆಯನ್ನು ಅವರು ಪರಿಗಣಿಸಲೇ ಇಲ್ಲ. ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಕೂಡ ಒಂದು ಕಾರಣವಾಗಿತ್ತು’ ಎಂದು ರಾಜ ಬೇಸರದಿಂದ ನುಡಿದರು.
‘ನನ್ನೊಂದಿಗೆ ಆಡಿದ ನಾಲ್ವರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇದು ಖುಷಿ ನೀಡಿದ ವಿಷಯ’ ಎಂದರು ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.