ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ವರ್ಷ ಗೋವಾ ಪರ ಆಡುತ್ತಿರುವ ಅರ್ಜುನ್, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅರ್ಜುನ್ 2 ಸಿಕ್ಸರ್ ಮತ್ತು 16 ಬೌಂಡರಿಗಳ ಸಹಿತ 120 ರನ್ ಗಳಿಸಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಎರಡನೇ ದಿನದಾಟ ಅಂತ್ಯಕ್ಕೆ ಗೋವಾ ತಂಡ 163.2 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 493 ರನ್ ಗಳಿಸಿದೆ.
ಈ ಶತಕದ ಮೂಲಕ ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ 1988ರಲ್ಲಿ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೂ ಶತಕ ಸಿಡಿಸಿದ್ದರು.
ಕಳೆದ ಆವೃತ್ತಿಯವರೆಗೆ ಮುಂಬೈ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮುಂಬೈ ತಂಡ ತೊರೆದಿದ್ದ ಅರ್ಜುನ್ ಗೋವಾ ಪರ ರಣಜಿ ಆಡಲು ನಿರ್ಧರಿಸಿದ್ದರು.
ಅರ್ಜುನ್ ತೆಂಡೂಲ್ಕರ್ ಅವರ ಈ ಇನ್ನಿಂಗ್ಸ್ ಅವರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದ್ದಲ್ಲದೆ, ಮುಂಬರುವ ರಣಜಿ ಪಂದ್ಯಗಳಲ್ಲೂ ಅರ್ಜುನ್ ಉತ್ತಮ ಪ್ರದರ್ಶನ ತೋರಿದರೆ ಮುಂಬೈ ಇಂಡಿಯನ್ಸ್ ತಂಡದ ಪರ ಅವರು ಐಪಿಎಲ್ಗೆ ಪದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.