ರಾಂಚಿ: ಕೋವಿಡ್ ಹಾವಳಿಯಿಂದಾಗಿ ಅರ್ಧಕ್ಕೆ ನಿಂತ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ತಮ್ಮ ಮನೆಗಳಿಗೆ ತೆರಳಿರುವ ಕೆಲವು ಕ್ರಿಕೆಟಿಗರು ಸುಮ್ಮನೆ ಕುಳಿತಿಲ್ಲ.
ಅದರಲ್ಲಿ ಜಾರ್ಖಂಡ್‌ನ ಯುವ ಕ್ರಿಕೆಟಿಗರಾದ ಸೌರಭ್ ತಿವಾರಿ ಮತ್ತು ವಿರಾಟ್ ಸಿಂಗ್ ಅವರು ಪಿಪಿಎಲ್ (ಪ್ಲಾಸ್ಮಾ ಪ್ರೀಮಿಯರ್ ಲೀಗ್ ) ಅಥವಾ ಟೆಲ್ಕೊ ರೆಡ್ ಪ್ಯಾಂಥರ್ಸ್‌ನಲ್ಲಿ ತಮ್ಮ ‘ಆಟ‘ ತೋರಿಸುತ್ತಿದ್ದಾರೆ.
ಆದರೆ ಇದು ಕ್ರಿಕೆಟ್ ಆಟವಂತೂ ಅಲ್ಲ. ಕೋವಿಡ್ ರೋಗಿಗಳ ಜೀವ ಉಳಿಸುವ ಅಭಿಯಾನವಿದು. ಕೊರೊನಾ ವೈರಸ್‌ನ ಎರಡನೇ ಅಲೆಯು ದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿಗೆ ಅಡೆತಡೆಯುಂಟಾಗಿದೆ.
ಇಲ್ಲಿಯ ಮಾಜಿ ಶಾಸಕ ಕುನಾಲ್ ಸಾರಂಗಿ ಅವರು ಆರಂಭಿಸಿರುವ ಪಿಪಿಎಲ್‌ಗೆ ಸೌರಭ್ ಮತ್ತು ವಿರಾಟ್ ಕೈಜೋಡಿಸಿದ್ದಾರೆ. ಅವರಲ್ಲದೇ ಸರ್ಕಾರದ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಉದ್ಯಮಗಳು ಕೈಜೋಡಿಸಿವೆ.
‘ಈ ಲೀಗ್‌ನಲ್ಲಿ ಒಂಬತ್ತು ತಂಡಗಳನ್ನು ರಚಿಸಲಾಗಿದೆ. ಪ್ರೀಷಿಯಸ್ ಪ್ಲಾಸ್ಮಾ ಟೈಗರ್ಸ್, ಟೆಲ್ಕೊ ರೆಡ್ ಪ್ಯಾಂಥರ್ಸ್, ತ್ರಿಎಸ್ ಡೋನೆಟರ್ಸ್, ಹೆಲ್ಪಿಂಗ್ ಹ್ಯಾಂಡ್ಸ್, ಸ್ಟೀಲ್ ಸಿಟಿ ವಾರಿಯರ್ಸ್, ಜುಗ್ಸಲಾಯ್ ಮಾಸ್ಕ್, ಸನ್‌ರೈಸ್ ಸೂಪರ್ ಸ್ಟಾರ್, ಜೆಮ್ಶೆಡ್‌ಪುರ್ ಕಿಂಗ್ಸ್ ಮತ್ತು ರೋಟರ‍್ಯಾಕ್ಟ್ ಇಲೆವನ್ ಎಂದು ಹೆಸರಿಸಲಾಗಿದೆ.
‘ಪ್ರತಿ ತಂಡವೂ ಪ್ಲಾಸ್ಮಾ ದಾನ ಅಥವಾ ರಕ್ತದಾನ ಮಾಡಿದಾಗಲೊಮ್ಮೆ ಸಿಕ್ಸರ್ ಅಥವಾ ಬೌಂಡರಿ ರನ್ ಗಳಿಸುತ್ತದೆ. ಈ ಅಭಿಯಾನದಲ್ಲಿ ಸಂಗ್ರಹಿಸಿದ ಪ್ಲಾಸ್ಮಾ–ರಕ್ತವನ್ನು ಜೆಮ್ಶೆಡ್‌ಪುರ್ ರಕ್ತನಿಧಿಗೆ ಕಳುಹಿಸಲಾಗುತ್ತದೆ. ಅದರಿಂದಾಗಿ ಅಗತ್ಯವಿರುವವರಿಗೆ ಸೂಕ್ತ ಸಮಯದಲ್ಲಿ ರಕ್ತ ಪೂರೈಕೆ ಮಾಡಲು ಅನುಕೂಲವಾಗುತ್ತದೆ‘ ಎಂದು ಪಿಪಿಎಲ್ ಸಂಸ್ಥಾಪಕ ಸಾರಂಗಿ ಹೇಳಿದ್ದಾರೆ.
ಕೈಗಾರಿಕೆಗಳ ಒಕ್ಕೂಟ, ಯಂಗ್ ಇಂಡಿಯನ್ಸ್ ಮತ್ತು ಮಾರ್ವಾಡಿ ಯುವ ಮಂಚ್ ಕೂಡ ಈ ಅಭಿಯಾನದಲ್ಲಿ ಭಾಗಿಯಾಗಿವೆ. ಬಾಲಿವುಡ್ ತಾರೆ ಭೂಮಿ ಪೆಡ್ನೆಕರ್ ಸೇರಿದಂತೆ ಕೆಲವು ನಟ, ನಟಿಯರೂ ಕೈಜೋಡಿಸುತ್ತಿದ್ದಾರೆ ಎಂದು ಸಾರಂಗಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.