ಸಿಡ್ನಿ: ಆ್ಯಷಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಿತು. ಉತ್ತಮ ಆರಂಭ ಕಂಡ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಇಂಗ್ಲೆಂಡ್ ವೇಗಿಗಳು ಪೆಟ್ಟು ನೀಡಿದ್ದರಿಂದ ದಿಢೀರ್ ಕುಸಿತ ಕಂಡಿತು.
ಮೊದಲ ಮೂರು ಪಂದ್ಯಗಳನ್ನು ಗೆದ್ದು ಈಗಾಗಲೇ ಸರಣಿ ತನ್ನದಾಗಿಸಿಕೊಂಡಿರುವ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಳೆಯಿಂದಾಗಿ ಆಟ ನಿಂತಾಗ ತಂಡ 46.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 126 ರನ್ ಗಳಿಸಿದೆ.
ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಹ್ಯಾರಿಸ್ ಮೊದಲ ವಿಕೆಟ್‌ಗೆ ಅರ್ಧಶತಕದ (51) ಜೊತೆಯಾಟವಾಡಿದರು. ಬ್ರಾಡ್ ಎಸೆತದಲ್ಲಿ ವಾರ್ನರ್ ಔಟಾದರು. ಹ್ಯಾರಿಸ್ ಜೊತೆಗೂಡಿದ ಮಾರ್ನಸ್ ಲಾಬುಶೇನ್ ಇನಿಂಗ್ಸ್ ಮುನ್ನಡೆಸಿದರು. ಎರಡನೇ ವಿಕೆಟ್‌ಗೆ ಇವರಿಬ್ಬರು 60 ರನ್ ಸೇರಿಸಿದರು.
ಈ ಸಂದರ್ಭದಲ್ಲಿ ಹ್ಯಾರಿಸ್ ವಿಕೆಟ್ ಕಬಳಿಸಿ ಜೇಮ್ಸ್ ಆ್ಯಂಡರ್ಸನ್ ತಿರುಗೇಟು ನೀಡಿದರು. ಆರು ರನ್ ಗಳಿಸುವಷ್ಟರಲ್ಲಿ ಅಂತರದಲ್ಲಿ ಲಾಬುಶೇನ್ ಅವರು ಮಾರ್ಕ್‌ವುಡ್‌ಗೆ ಬಲಿಯಾದರು. ದಿನದಾಟದ ಮುಕ್ತಾಯಕ್ಕೆ 6 ರನ್‌ಗಳೊಂದಿಗೆ ಸ್ಟೀವ್ ಸ್ಮಿತ್ ಕ್ರೀಸ್‌ನಲ್ಲಿದ್ದಾರೆ. 2019ರ ನಂತರ ಮೊದಲ ಟೆಸ್ಟ್ ಆಡುತ್ತಿರುವ ಉಸ್ಮಾನ್ ಖ್ವಾಜಾ 4 ರನ್‌ಗಳೊಂದಿಗೆ ಸ್ಮಿತ್ ಜೊತೆಯಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 46.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 126 (ಡೇವಿಡ್ ವಾರ್ನರ್ 30, ಮಾರ್ಕಸ್ ಹ್ಯಾರಿಸ್ 38, ಮಾರ್ನಸ್ ಲಾಬುಶೇನ್ 28, ಸ್ಟೀವ್ ಸ್ಮಿತ್ ಬ್ಯಾಟಿಂಗ್ 6, ಉಸ್ಮಾನ್ ಖ್ವಾಜಾ ಬ್ಯಾಟಿಂಗ್ 4; ಜೇಮ್ಸ್ ಆ್ಯಂಡರ್ಸನ್ 24ಕ್ಕೆ1, ಸ್ಟುವರ್ಟ್ ಬ್ರಾಡ್ 34ಕ್ಕೆ1, ಮಾರ್ಕ್ ವುಡ್ 31ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.