ಲಂಡನ್: ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿದೆ. ಆದರೆ ಈ ಪಂದ್ಯದಲ್ಲಿ ಮೂರನೇ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ನಿತಿನ್ ಮೆನನ್ ಅವರು ನೀಡಿದ ನಿಖರ ತೀರ್ಪು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಘಟನೆ?
ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ವೇಗಿ ಕ್ರೀಸ್ ವೋಕ್ಸ್ ಎಸೆದ ಇನಿಂಗ್ಸ್‌ನ 78ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು.
ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ವೇಳೆ ಕ್ರೀಸಿನಲ್ಲಿದ್ದ ಮಾಜಿ ನಾಯಕ ಸ್ಟೀವ್ ಸ್ಮಿತ್, ಮಿಡ್ ವಿಕೆಟ್‌ನತ್ತ ಹೊಡೆದು ಎರಡನೇ ರನ್ ಕದಿಯಲು ಯತ್ನಿಸಿದ್ದರು. ಈ ವೇಳೆ ಬದಲಿ ಫೀಲ್ಡರ್ ಜಾರ್ಜ್ ಎಲ್ಹಾಮ್ ಅವರು ಎಸೆದ ಥ್ರೋವನ್ನು ಹಿಡಿದ ವಿಕೆಟ್ ಕೀಪರ್ ಜಾನಿ ಬೆಸ್ಟೋ ಬೇಲ್ಸ್ ಹಾರಿಸುವಲ್ಲಿ ಯಶಸ್ವಿಯಾಗಿದ್ದರು.
ಮೊದಲ ನೋಟದಲ್ಲಿ ಔಟ್ ಎಂದೇ ಭಾಸವಾಗುತ್ತಿತ್ತು. ಇಂಗ್ಲೆಂಡ್ ಆಟಗಾರರು ಸಂಭ್ರಮಿಸಿದರು. ಸ್ಮಿತ್ ಕೂಡಾ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು. ಆದರೆ ಮೈದಾನದಲ್ಲಿದ್ದ ಅಂಪೈರ್ ಟಿ.ವಿ ರೀಪ್ಲೇ ಪರಿಶೀಲಿಸಲು ಮೂರನೇ ಅಂಪೈರ್ ಮೊರೆ ಹೋದರು.
ಆದರೆ ಎಲ್ಲ ಕೋನಗಳಿಂದ ರೀಪ್ಲೇ ಅನ್ನು ಕೂಲಂಕಷವಾಗಿ ಪರಿಶೀಲಿಸಿದ ನಿತಿನ್ ಮೆನನ್, ನಾಟೌಟ್ ಎಂದು ಘೋಷಿಸಿದರು. ವಿಕೆಟ್‌ನಿಂದ ಬೇಲ್ಸ್ ಬೇರ್ಪಟ್ಟ ಸಂದರ್ಭದಲ್ಲಿ ಗೆರೆಯನ್ನು ಬ್ಯಾಟ್ ದಾಟಿತ್ತು ಎಂಬುದನ್ನು ಅವರು ಮನಗಂಡಿದ್ದರು.
ಮೆನನ್ ತೀರ್ಪು ಇಂಗ್ಲೆಂಡ್ ಆಟಗಾರರಿಗೆ ನಂಬಲು ಸಾಧ್ಯವಾಗಲಿಲ್ಲ. ನೆರೆದಿದ್ದ ಪ್ರೇಕ್ಷಕರು ಸಹ ಕಿರುಚಾಡಿದರು. ಆದರೆ ಅತ್ಯಂತ ಒತ್ತಡದ ಸನ್ನಿವೇಶದಲ್ಲೂ ಅತ್ಯಂತ ಸೂಕ್ಷ್ಮತೆಯಿಂದ ನಿಖರ ತೀರ್ಪು ನೀಡುವಲ್ಲಿ ಮೆನನ್ ಯಶಸ್ವಿಯಾಗಿದ್ದರು.
ಭಾರತದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಹ ಮೆನನ್ ಅವರು ನೀಡಿರುವ ಸರಿಯಾದ ತೀರ್ಪನ್ನು ಶ್ಲಾಘಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಸಹ ಭಾರತೀಯ ಅಂಪೈರ್‌ನ ನಿಖರ ತೀರ್ಪನ್ನು ಶ್ಲಾಘಿಸಿದ್ದಾರೆ.
ಅಂದ ಹಾಗೆ ಇಂಗ್ಲೆಂಡ್‌ನ 283 ರನ್‌ಗಳಿಗೆ ಉತ್ತರವಾಗಿ ಸ್ಮಿತ್ ಗಳಿಸಿದ ಸಮಯೋಚಿತ ಅರ್ಧಶತಕದ (71) ನೆರವಿನಿಂದ ಆಸ್ಟೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 295 ರನ್ ಗಳಿಸಲು ಸಾಧ್ಯವಾಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 12 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.