ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಪಂದ್ಯದಲ್ಲಿ ವಿಚಿತ್ರವಾದ ಘಟನೆಯೊಂದು ನಡೆಯಿತು. ವಿಕೆಟ್‌ಗೆ ಚೆಂಡು ಅಪ್ಪಳಿಸಿದರೂ ಬೇಲ್ಸ್ ಹಾರಲಿಲ್ಲ. ಅತ್ತ ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯು ಎಂದು ಔಟ್ ಕೂಡ ನೀಡಿದ್ದರು. ಕೊನೆಗೆ ಮೇಲ್ಮನವಿಯಲ್ಲಿ ನಾಟೌಟ್ ಎಂದು ಘೋಷಿಸಲಾಯಿತು. ಇವೆಲ್ಲವೂ ಕ್ರಿಕೆಟ್ ಲೋಕವನ್ನೇ ನಿಬ್ಬೆರಾಗುವಂತೆ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಉಸ್ಮಾನ್ ಖ್ವಾಜಾ ಶತಕದ ಬಲದೊಂದಿಗೆ ಎಂಟು ವಿಕೆಟ್ ನಷ್ಟಕ್ಕೆ 416 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಬಳಿಕ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಈ ವಿಚಿತ್ರ ಪ್ರಸಂಗ ನಡೆಯಿತು.
ಊಟದ ವಿರಾಮದ ಬಳಿಕ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೆಸ್ಟೊ ದಿಟ್ಟ ಹೋರಾಟ ಮುಂದುವರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಕ್ಯಾಮರೂನ್ ಗ್ರೀನ್ ದಾಳಿಗೆ ಉತ್ತರಿಸಲು ಬೆನ್ ಸ್ಟೋಕ್ಸ್ ಮನಸ್ಸು ಮಾಡಲಿಲ್ಲ.
ಆದರೆ ಚೆಂಡು ನೇರವಾಗಿ ಆಫ್ ಸ್ಟಂಪ್‌ಗೆ ಬಡಿದು ವಿಕೆಟ್ ಕೀಪರ್ ಕೈಸೇರಿತ್ತು. ಈ ಹಂತದಲ್ಲಿ ಬಲವಾದ ಮನವಿ ಪುರಸ್ಕರಿಸಿದ ಅಂಪೈರ್, ಎಲ್‌ಬಿಡಬ್ಲ್ಯು ಎಂದು ಔಟ್ ತೀರ್ಪು ನೀಡಿದರು.
ಇದರಿಂದ ತಬ್ಬಿಬ್ಬಾದ ಸ್ಟೋಕ್ಸ್ ಹಿಂದೆ ಮುಂದೆ ನೋಡದೆ ಡಿಆರ್‌ಎಸ್ ಮನವಿಗೆ ಮೊರೆ ಹೋದರು. ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ವಿಕೆಟ್‌ಗೆ ತಗುಲಿರುವುದು ಸ್ಪಷ್ಟವಾಗಿತ್ತು. ಆದರೆ ಬೇಲ್ಸ್ ಹಾರದ ಕಾರಣ ನಾಟೌಟ್ ಎಂದು ಘೋಷಿಸಲಾಯಿತು.
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಕ್ರಿಕೆಟ್‌ನಲ್ಲಿ 'ಹಿಟ್ಟಿಂಗ್ ದಿ ಸ್ಟಂಪ್ಸ್' ಎಂಬ ಹೊಸ ನಿಮಯವನ್ನು ಅವಿಷ್ಕಾರ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಬೌಲರ್‌ಗಳಿಗೂ 'ಸಮಾನ ನೀತಿ' ಕುರಿತು ಪ್ರದಿಪಾದಿಸಿರುವ ಸಚಿನ್, ಕ್ರಿಕೆಟ್ ಪ್ರಿಯರ ಅಭಿಪ್ರಾಯಗಳನ್ನು ಕೇಳಿದ್ದಾರೆ.
ಈ ಘಟನೆ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಸಚಿನ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಚರ್ಚೆಯ ವಿಷಯ ಎಂದು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಈ ವಿಷಯವನ್ನು ಕ್ರಿಕೆಟ್ ಸಮಿತಿ ಮಾತುಕತೆಯಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ. ಗ್ರೀನ್ ಅವರ ದಾಳಿಯು ಗಂಟೆಗೆ 142 ಕಿ.ಮೀ. ವೇಗದಲ್ಲಿ ಸ್ಟಂಪ್‌ಗೆ ಬಡಿದಿತ್ತು ಎಂದು ವಾರ್ನ್ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.