ಆ್ಯಷಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಮಿಂಚಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ವಿಶಿಷ್ಟ ಸಾಧನೆ ಮಾಡಿದರು.
ಈ ಪಂದ್ಯದ ಐದು ದಿನಗಳಲ್ಲಿಯೂ ಉಸ್ಮಾನ್ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದೇ ಆ ವಿಶೇಷ. ಇಂಗ್ಲೆಂಡ್ ತಂಡವು ಮೊದಲ ದಿನ ಸಂಜೆ ಡಿಕ್ಲೇರ್ ಮಾಡಿಕೊಂಡಿತು. ಆಗ ಕ್ರೀಸ್‌ಗೆ ಬಂದ ಉಸ್ಮಾನ್ ನಾಲ್ಕು ರನ್ ಗಳಿಸಿ ಔಟಾಗದೇ ಉಳಿದರು. ಎರಡನೇ ದಿನವಿಡೀ ಆಡಿದ ಅವರು ಶತಕ (126 ರನ್) ಬಾರಿಸಿ ಅಜೇಯರಾಗುಳಿದರು. ಮೂರನೇ ದಿನ ಬೆಳಿಗ್ಗೆ ತಮ್ಮ ಮೊತ್ತಕ್ಕೆ 15 ರನ್ ಸೇರಿಸಿ ಔಟಾದರು.
ನಾಲ್ಕನೇ ದಿನ ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್ ಮುಗಿಯಿತು. ಇದರಿಂದಾಗಿ ಆಸ್ಟ್ರೇಲಿಯಾ ಬಳಗವು 281 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿತು. ಈ ಇನಿಂಗ್ಸ್‌ನಲ್ಲಿಯೂ ಉಸ್ಮಾನ್ ಛಲದ ಆಟವಾಡಿದರು. 34 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಕೊನೆಯ ದಿನದಾಟದಲ್ಲಿ 31 ರನ್ ಸೇರಿಸಿ ಔಟಾದರು. ಆ ಮೂಲಕ ಪಂದ್ಯದ ಎಲ್ಲ ದಿನಗಳಲ್ಲಿಯೂ ಕ್ರೀಸ್‌ನಲ್ಲಿ ಕಾಣಿಸಿಕೊಂಡರು. ಈ ಪಂದ್ಯದಲ್ಲಿ ಅವರು ಒಟ್ಟು 207 ರನ್ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.