ADVERTISEMENT

ಮಂಕಡಿಂಗ್‌’ ವಿವಾದದಲ್ಲಿ ನನ್ನನ್ನು ವಿಲನ್‌ ಮಾಡಬೇಡಿ: ಅಶ್ವಿನ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 18:17 IST
Last Updated 5 ಏಪ್ರಿಲ್ 2019, 18:17 IST
ಜೋಸ್‌ ಬಟ್ಲರ್‌ (ಎಡ) ಮತ್ತು ಆರ್‌.ಅಶ್ವಿನ್‌
ಜೋಸ್‌ ಬಟ್ಲರ್‌ (ಎಡ) ಮತ್ತು ಆರ್‌.ಅಶ್ವಿನ್‌   

ನವದೆಹಲಿ: ‘ಮಂಕಡಿಂಗ್‌’ ವಿವಾದದಲ್ಲಿ ನನ್ನನ್ನು ವಿಲನ್‌ ಮಾಡಬೇಡಿ’ ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.

ಮಾರ್ಚ್‌ 25ರಂದು ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ಅಶ್ವಿನ್‌ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಜೋಸ್‌ ಬಟ್ಲರ್‌ ಅವರನ್ನು ‘ಮಂಕಡಿಂಗ್‌’ ರೀತಿಯಲ್ಲಿ ರನ್‌ಔಟ್‌ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

‘ಮಂಕಡಿಂಗ್’ ರೀತಿಯಲ್ಲಿ ರನ್‌ಔಟ್‌ ಮಾಡಿದ್ದು ಸರಿಯೊ, ತಪ್ಪೊ ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಮುಕ್ತ ಸ್ವಾತಂತ್ರ್ಯವಿದೆ. ಈ ವಿಚಾರದಲ್ಲಿ ನನ್ನತ್ತ ಯಾರೂ ಬೊಟ್ಟು ಮಾಡುವಂತಿಲ್ಲ. ನಾನು ವಿಲನ್‌ ಅಲ್ಲ. ಅದು ನನ್ನ ಸ್ವಭಾವವೂ ಅಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ನಮ್ಮ ಬೌಲರ್‌ಗಳು ಚೆಂಡನ್ನು ಎಸೆಯುವ ಮುನ್ನವೇ ನಾನ್‌ಸ್ಟ್ರೈಕ್‌ನಲ್ಲಿದ್ದ ಬಟ್ಲರ್‌ ಪದೇ ಪದೇ ಕ್ರೀಸ್‌ ಬಿಟ್ಟು ಮುಂದೆ ಹೋಗುತ್ತಿದ್ದರು. ನಾನು ಬೌಲಿಂಗ್‌ಗೆ ಬಂದಾಗಲೂ ಹಾಗೆಯೇ ಮಾಡಿದ್ದರಿಂದ ಅವರನ್ನು ರನ್ಔಟ್‌ ಮಾಡಿದೆ. ಅದು ಪೂರ್ವ ನಿಯೋಜಿತವಾಗಿರಲಿಲ್ಲ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಬೌಲಿಂಗ್‌ ಮಾಡುವ ಮುನ್ನ ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಟ್ಟು ಮುಂದೆ ಹೋದರೆ ಬೇಲ್ಸ್‌ ಎಗರಿಸಬಹುದು ಎಂದು ನಿಯಮ ಹೇಳುತ್ತದೆ. ಯಾವ ಬೌಲರ್‌ ಕೂಡಾ ಕ್ರೀಸ್‌ನಲ್ಲೇ ಇರು ಎಂದು ಎದುರಾಳಿ ಬ್ಯಾಟ್ಸ್‌ಮನ್‌ಗೆ ಸಲಹೆ ನೀಡುವುದಿಲ್ಲ. ಕ್ರೀಸ್‌ನಲ್ಲಿ ಇರಬೇಕಾದದ್ದು ಬ್ಯಾಟ್ಸ್‌ಮನ್‌ ಕರ್ತವ್ಯ. ಅದನ್ನು ಆತ ಪಾಲಿಸಬೇಕು’ ಎಂದಿದ್ದಾರೆ.

‘ಯಶಸ್ಸು ಪಡೆಯಲು ಎಂದೂ ಅಡ್ಡದಾರಿ ಹಿಡಿದವನಲ್ಲ. ಅದರ ಅಗತ್ಯವೂ ನನಗಿಲ್ಲ. ನನ್ನ ಸ್ವಭಾವ ಎಂತಹುದು ಎಂಬುದು ಆತ್ಮೀಯರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಅಶ್ವಿನ್‌ ಹೇಳಿದ್ದಾರೆ.

‘ಇಂಗ್ಲೆಂಡ್‌ನ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ ಅವರಿಗೆ ನಾನು ಮಾಡಿದ್ದು ತಪ್ಪು ಅಂತ ಅನಿಸಿರಬಹುದು. ಹೀಗಾಗಿ ಅವರು ನನ್ನ ನಡೆಯನ್ನು ಟೀಕಿಸಿದ್ದಾರೆ. ಮುಂದೊಂದು ದಿನ ಅವರೂ ‘ಮಂಕಡಿಂಗ್‌’ ಮೂಲಕ ಎದುರಾಳಿ ಆಟಗಾರನನ್ನು ಔಟ್‌ ಮಾಡುವ ಸಮಯ ಬರಬಹುದು. ಆಗ ಏನು ಮಾಡುತ್ತಾರೆ ಎಂಬುದನ್ನು ನೋಡೋಣ’ ಎಂದು ಆ್ಯಂಡರ್ಸನ್‌ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.

‘ಮಂಕಡಿಂಗ್‌ ರನ್‌ಔಟ್‌ಗೆ ಏಕೆ ವಿವಾದದ ರೂಪ ನೀಡಲಾಯಿತು. ಅದರ ಕುರಿತು ಯಾಕೆ ಅಷ್ಟೊಂದು ಚರ್ಚೆಗಳಾದವು ಎಂಬುದು ತಿಳಿಯುತ್ತಿಲ್ಲ. ಹಾಗೆ ಔಟ್‌ ಮಾಡಿದರೆ ತಪ್ಪಿಲ್ಲ ಎಂದು ನಿಯಮವೇ ಹೇಳುತ್ತಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಅಶ್ವಿನ್‌ ಚೆಂಡನ್ನು ಎಸೆಯಲು ಮುಂದಾದಾಗ ನಾನು ಕ್ರೀಸ್‌ನಲ್ಲೇ ಇದ್ದೆ. ಘಟನೆಯ ವಿಡಿಯೊ ವೀಕ್ಷಿಸಿದರೆ ಇದು ಮನದಟ್ಟಾಗುತ್ತದೆ. ಅಂಪೈರ್‌ಗಳು ನೀಡಿದ ತೀರ್ಪು ತಪ್ಪಾಗಿತ್ತು’ ಎಂದು ಬಟ್ಲರ್‌ ಗುರುವಾರ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.