ADVERTISEMENT

IND vs SL: ರೋಹಿತ್ 10,000 ರನ್, ಕುಲದೀಪ್ 150 ವಿಕೆಟ್ ಸಾಧನೆ

ನಾಗರಾಜ್ ಬಿ.
Published 13 ಸೆಪ್ಟೆಂಬರ್ 2023, 4:19 IST
Last Updated 13 ಸೆಪ್ಟೆಂಬರ್ 2023, 4:19 IST
<div class="paragraphs"><p>ರೋಹಿತ್ ಶರ್ಮಾ ಹಾಗೂ ಕುಲದೀಪ್ ಯಾದವ್</p></div>

ರೋಹಿತ್ ಶರ್ಮಾ ಹಾಗೂ ಕುಲದೀಪ್ ಯಾದವ್

   

(ಪಿಟಿಐ ಚಿತ್ರ)

ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 41 ರನ್‌ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಫೈನಲ್‌ಗೆ ಲಗ್ಗೆಯಿಟ್ಟಿದೆ.

ADVERTISEMENT

ಈ ಪಂದ್ಯದಲ್ಲಿ ಅನೇಕ ದಾಖಲೆ ಬರೆದಿದ್ದು, ಈ ಕುರಿತು ಅಂಕಿ-ಅಂಶಗಳನ್ನು ಇಲ್ಲಿ ಕೊಡಲಾಗಿದೆ.

ರೋಹಿತ್ ಹತ್ತು ಸಾವಿರ ರನ್...

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಗಡಿ ದಾಟಿದರು. ಈ ಸಾಧನೆ ಮಾಡಿದ ಭಾರತದ ಆರನೇ ಹಾಗೂ ಒಟ್ಟಾರೆ 15ನೇ ಬ್ಯಾಟರ್‌ ಆದರು.

ಈ ಮೂಲಕ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರಸಿಂಗ್ ಧೋನಿ ಅವರ ಸಾಲಿಗೆ ರೋಹಿತ್ ಸೇರಿದರು. 36 ವರ್ಷದ ರೋಹಿತ್ ಇದುವರೆಗೆ 248 ಪಂದ್ಯಗಳಲ್ಲಿ ಆಡಿದ್ದಾರೆ. 30 ಶತಕ, ಮೂರು ದ್ವಿಶತಕ ಹಾಗೂ 51 ಅರ್ಧಶತಕ ಗಳಿಸಿದ್ದಾರೆ.

ಅಲ್ಲದೆ ವಿರಾಟ್ ಕೊಹ್ಲಿ ಬಳಿಕ ಅತಿ ವೇಗದಲ್ಲಿ 10 ಸಹಸ್ರ ರನ್ ಗಳಿಸಿದ ದಾಖಲೆಗೂ ಪಾತ್ರರಾಗಿದ್ದಾರೆ. ವಿರಾಟ್ 205, ರೋಹಿತ್ 241 ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 259 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 48 ಎಸೆತಗಳನ್ನು ಎದುರಿಸಿದ ರೋಹಿತ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.

ಏಕದಿನದಲ್ಲಿ ಭಾರತದ ಪರ ಗರಿಷ್ಠ ರನ್ ಸರದಾರರು:

ಸಚಿನ್ ತೆಂಡೂಲ್ಕರ್: 18,426

ವಿರಾಟ್ ಕೊಹ್ಲಿ: 13027

ಸೌರವ್ ಗಂಗೂಲಿ: 11,221

ರಾಹುಲ್ ದ್ರಾವಿಡ್: 10768

ಮಹೇಂದ್ರ ಸಿಂಗ್ ಧೋನಿ: 10,599

ರೋಹಿತ್ ಶರ್ಮಾ: 10,031

ಸ್ಪಿನ್ನರ್‌ಗಳಿಗೆ ಎಲ್ಲ 10 ವಿಕೆಟ್...

ರೋಹಿತ್ ಅರ್ಧಶತಕದ ಹೊರತಾಗಿಯೂ ಭಾರತ 49.1 ಓವರ್‌ಗಳಲ್ಲಿ 213 ರನ್‌‌ಗಳಿಗೆ ಆಲೌಟಾಯಿತು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಪಿನ್ನರ್‌ಗಳಿಗೆ ಎಲ್ಲ 10 ವಿಕೆಟ್‌ಗಳನ್ನು ಬಿಟ್ಟುಕೊಟ್ಟಿದೆ.

ಶ್ರೀಲಂಕಾದ ಪರ ಸ್ಪಿನ್ನರ್‌ಗಳಾದ ದುನಿತ್ ವಲ್ಲಾಳಗೆ ಐದು, ಚರಿತ ಅಸಲಂಕಾ ನಾಲ್ಕು ಮತ್ತು ಮಹೀಶ್ ತೀಕ್ಷ್ಮಣ ಒಂದು ವಿಕೆಟ್ ಗಳಿಸಿದರು.

ಶ್ರೀಲಂಕಾ ಗೆಲುವಿನ ಓಟಕ್ಕೆ ತೆರೆ...

ಭಾರತದ ವಿರುದ್ಧದ ಸೋಲಿನೊಂದಿಗೆ ಏಕದಿನದಲ್ಲಿ ಶ್ರೀಲಂಕಾದ ಸತತ 13 ಪಂದ್ಯಗಳ ಗೆಲುವಿನ ಓಟಕ್ಕೆ ತೆರೆ ಬಿದ್ದಿದೆ. ಈ ಹಿಂದೆ ಆಸ್ಟ್ರೇಲಿಯಾ ಏಕದಿನದಲ್ಲಿ ಅತಿ ಹೆಚ್ಚು ಸತತ 21 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು.

ಕುಲದೀಪ್ 150 ವಿಕೆಟ್ ಸಾಧನೆ...

ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಮೊಹಮ್ಮದ್ ಶಮಿ (80 ಪಂದ್ಯ) ಬಳಿಕ ಭಾರತದ ಪರ ಅತಿ ವೇಗದಲ್ಲಿ ಈ ಸಾಧನೆ ಮಾಡಿದ ಬೌಲರ್ ಎನಿಸಿದ್ದಾರೆ. ಕುಲದೀಪ್ 88ನೇ ಪಂದ್ಯದಲ್ಲಿ 150 ವಿಕೆಟ್‌ ಕಬಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಐದು ವಿಕೆಟ್ ಕಬಳಿಸಿದ್ದ ಕುಲದೀಪ್, ಲಂಕಾ ವಿರುದ್ಧವೂ ನಾಲ್ಕು ವಿಕೆಟ್ ಗಳಿಸಿದ್ದಾರೆ.

40ಕ್ಕೂ ಹೆಚ್ಚು ರನ್ ಹಾಗೂ ಐದು ವಿಕೆಟ್ ಸಾಧನೆ...

ಈ ಪಂದ್ಯದಲ್ಲಿ ಶ್ರೀಲಂಕಾದ 20 ವರ್ಷದ ದುನಿತ್ ವೆಲ್ಲಾಳಗೆ ಐದು ವಿಕೆಟ್ ಜೊತೆಗೆ 40ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಐದು ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲೂ ಮಿಂಚಿದ ವೆಲ್ಲಾಳಗೆ 42 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.