ದುಬೈ: ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಹಾಗೂ ಹಾರ್ದಿಕ್ ಪಾಂಡ್ಯ ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಶುಭಾರಂಭ ಮಾಡಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 5 ವಿಕೆಟ್ ಗೆಲುವು ಸಾಧಿಸಿತು.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 19.5 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. 148 ರನ್‌ಗಳ ಗುರಿ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ವಿರಾಟ್ ಕೊಹ್ಲಿ 35, ರವೀಂದ್ರ ಜಡೇಜ 35 ಹಾಗೂ ಹಾರ್ದಿಕ್ ಪಾಂಡ್ಯ ಔಟಾಗದೆ 33 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಭಾರತದ ಬೌಲರ್‌ಗಳು ಪಾಕಿಸ್ತಾನ 15 ರನ್‌ಗಳಿಸಿದ್ದಾಗ ಮೊದಲ ವಿಕೆಟ್ ಕಬಳಿಸಿದರು. ಬಾಬರ್ ಆಜಂ (10 ರನ್) ಅವರನ್ನು ಭುವನೇಶ್ವರ್ ಕುಮಾರ್ ಪೆವಿಲಿಯನ್‌ಗೆ ಕಳುಹಿಸಿದರು. ತಂಡದ ರನ್ 42 ಆಗಿದ್ದಾಗ ಫಖ್ರ್ ಜಮಾನ್ (10 ರನ್) ಅವರನ್ನು ಆವೇಶ್ ಖಾನ್ ಔಟ್ ಮಾಡಿದರು.
ಮಧ್ಯಮ ಓವರ್‌ಗಳಲ್ಲಿ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಪಾಯಕಾರಿಯಾಗಿ ಪರಿಣಮಿಸಲಿದ್ದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ (43 ರನ್) ಅವರನ್ನು ಔಟ್ ಮಾಡಿದರು. ಬಳಿಕ ಇಫ್ತಿಕಾರ್ ಅಹ್ಮದ್ ಹಾಗೂ ಖುಶ್ದಿಲ್ ಶಾ ಅವರನ್ನು ಔಟ್ ಮಾಡಿದ ಪಾಂಡ್ಯ ಪಾಕಿಸ್ತಾನ ಬೃಹತ್ ಮೊತ್ತದ ಸಾಗದಂತೆ ತಡೆದರು.
ಭಾರತ ಪರ ಹಾರ್ದಿಕ್ ಪಾಂಡ್ಯ 3, ಭುವನೇಶ್ವರ್ ಕುಮಾರ್ 4, ಆರ್ಷದೀಪ್ ಸಿಂಗ್ 2, ಆವೇಶ್ ಖಾನ್ 1 ವಿಕೆಟ್ ಕಬಳಿಸಿದರು.
ಆಡುವ ಹನ್ನೊಂದರ ಬಳಗದಲ್ಲಿ ರಿಷಭ್ ಪಂತ್ ಬದಲಿಗೆ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿರುವುದು ಭಾರತದ ಪರ ಮಹತ್ವದ ನಿರ್ಧಾರವೆನಿಸಿತ್ತು.
ಹತ್ತು ತಿಂಗಳುಗಳ ಹಿಂದಷ್ಟೇ ಟಿ20 ವಿಶ್ವಕಪ್‌ನಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತಕ್ಕೆ 10 ವಿಕೆಟ್ ಹೀನಾಯ ಸೋಲಾಗಿತ್ತು. ಆಗ ಹಣಾಹಣಿ ನಡೆದಿದ್ದ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿಯೇ ಈ ಪಂದ್ಯವೂ ನಡೆಯುತ್ತಿದೆ.
1984ರಲ್ಲಿ ಆರಂಭವಾದ ಏಷ್ಯಾ ಕಪ್‌ನಲ್ಲಿ ಭಾರತ ಇದುವರೆಗೆ ಒಟ್ಟು ಏಳು ಬಾರಿ ಪ್ರಶಸ್ತಿ ಜಯಿಸಿದೆ. 2016ರಲ್ಲಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ಆಯೋಜಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಟಿ20 ಮಾದರಿಯಲ್ಲೇ ಏಷ್ಯಾ ಕಪ್ ನಡೆಯುತ್ತಿದೆ.
ಕೊಹ್ಲಿಗೆ ನೂರನೇ ಪಂದ್ಯ
ವಿರಾಟ್ ಕೊಹ್ಲಿಗೆ ಇಂದಿನ ಪಂದ್ಯವು ಟಿ20 ಮಾದರಿಯಲ್ಲಿ ನೂರನೇಯದ್ದಾಗಿದೆ. ಇದರೊಂದಿಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ನೂರು ಪಂದ್ಯಗಳನ್ನಾಡಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಆಡುವ ಹನ್ನೊಂದರ ಬಳಗ
ಭಾರತ
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ತಾನ
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖ್ರ್ ಜಮಾನ್, ಹ್ಯಾರಿಸ್ ರವೂಫ್, ಮೊಹಮ್ಮದ್ ನವಾಜ್,ಮೊಹಮ್ಮದ್ ರಿಜ್ವಾನ್, ನಸೀಂ ಶಾ, ಶಾನವಾಜ್ ದಹಾನಿ, ಮೊಹಮ್ಮದ್ ಹಸನೈನ್, ಹಸನ್ ಅಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.