ADVERTISEMENT

ಏಷ್ಯಾ ಕಪ್‌ ಫೈನಲ್‌: ಪ್ರಶಸ್ತಿಗೆ ಪಾಕ್‌– ಲಂಕಾ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 11:25 IST
Last Updated 10 ಸೆಪ್ಟೆಂಬರ್ 2022, 11:25 IST
ಪಾಕ್‌ ತಂಡದ ನಾಯಕ ಬಾಬರ್‌ ಅಜಂ (ಎಡ) ಮತ್ತು ಲಂಕಾ ತಂಡದ ನಾಯಕ ದಸುನ್‌ ಶನಕ –ಎಪಿ ಚಿತ್ರ
ಪಾಕ್‌ ತಂಡದ ನಾಯಕ ಬಾಬರ್‌ ಅಜಂ (ಎಡ) ಮತ್ತು ಲಂಕಾ ತಂಡದ ನಾಯಕ ದಸುನ್‌ ಶನಕ –ಎಪಿ ಚಿತ್ರ   

ದುಬೈ: ಏಷ್ಯಾದ ‘ಕ್ರಿಕೆಟ್‌ ಶಕ್ತಿ’ ಯಾರೆಂಬುದನ್ನು ನಿರ್ಧರಿಸುವ ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾನುವಾರ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿದ್ದು, ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ, ಶ್ರೀಲಂಕಾ ಆಟಗಾರರ ಪಾಲಿಗೆ ಮಹತ್ವದ್ದಾಗಿದೆ. ಏಕೆಂದರೆ ಈ ಪುಟ್ಟ ದ್ವೀಪರಾಷ್ಟ್ರವು ಕಳೆದ ಕೆಲ ಸಮಯಗಳಿಂದ ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿದೆ. ಏಷ್ಯಾ ಕಪ್‌ ಗೆದ್ದು ತನ್ನ ದೇಶದ ಜನರ ನೋವನ್ನು ಅಲ್ಪ ಮರೆಸುವ ಅವಕಾಶ ದಸುನ್ ಶನಕ ಬಳಗಕ್ಕೆ ದೊರೆತಿದೆ.

ಶುಕ್ರವಾರ ನಡೆದ ‘ಸೂಪರ್‌ 4’ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡ, ಪಾಕ್‌ ಎದುರು ಐದು ವಿಕೆಟ್‌ಗಳ ಜಯ ಪಡೆದಿತ್ತು. ಈ ಗೆಲುವು ನೀಡಿದ ಆತ್ಮವಿಶ್ವಾಸದೊಂದಿಗೆ ಭಾನುವಾರ ಕಣಕ್ಕಿಳಿಯಲಿದೆ. .

ADVERTISEMENT

ಲಂಕಾ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಲಯದಲ್ಲಿದ್ದಾರೆ. ಕುಸಾಲ್‌ ಮೆಂಡಿಸ್‌ ಮತ್ತು ಪಥುಮ್‌ ನಿಸಾಂಕ ಉತ್ತಮ ಆರಂಭ ನೀಡುತ್ತಿದ್ದಾರೆ. ಧನುಷ್ಕಾ ಗುಣತಿಲಕ, ಭಾನುಕ ರಾಜಪಕ್ಸ ಮತ್ತು ದಸುನ್‌ ಶನಕ ಅವರು ಆ ಬಳಿಕ ಇನಿಂಗ್ಸ್‌ಗೆ ಬಲ ತುಂಬುವರು.

ಮತ್ತೊಂದೆಡೆ ಪಾಕಿಸ್ತಾನ ಕೂಡಾ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. ನಾಯಕ ಬಾಬರ್ ಅಜಂ ಈ ಟೂರ್ನಿಯಲ್ಲಿ ಇನ್ನೂ ಲಯ ಕಂಡುಕೊಳ್ಳದೇ ಇರುವುದು ತಂಡದ ಚಿಂತೆಗೆ ಕಾರಣವಾಗಿದೆ. ಆದರೆ ಮೊಹಮ್ಮದ್ ರಿಜ್ವಾನ್‌ ಮತ್ತು ಮೊಹಮ್ಮದ್‌ ನವಾಜ್‌ ಎದುರಾಳಿ ಬೌಲಿಂಗ್‌ ದಾಳಿಯ ದಿಕ್ಕುತಪ್ಪಿಸುವ ತಾಕತ್ತು ಹೊಂದಿದ್ದಾರೆ.

ಪಾಕ್‌ ತಂಡದ ಬಲ ಬೌಲಿಂಗ್‌ ವಿಭಾಗದಲ್ಲಿ ಅಡಗಿದೆ. ನಸೀಮ್‌ ಶಾ, ಹ್ಯಾರಿಸ್‌ ರವೂಫ್‌ ಮತ್ತು ಮೊಹಮ್ಮದ್‌ ಹಸನೈನ್‌ ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಸ್ಪಿನ್ನರ್‌ಗಳಾದ ಶಾದಾಬ್‌ ಖಾನ್‌ ಮತ್ತು ಮೊಹಮ್ಮದ್‌ ನವಾಜ್‌ ಅವರೂ ರನ್‌ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.