ದುಬೈ: ಸುಮಾರು ಒಂದು ದಶಕದಿಂದ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಆಧಾರಸ್ತಂಭಗಳಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗ ತಮ್ಮ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿದ್ದಾರೆ.
ಇಬ್ಬರಿಗೂ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳುವ ಸವಾಲು ಇದೆ. ಆದರೆ ರೋಹಿತ್ ನಾಯಕನಾಗಿಯೂ ಗೆಲ್ಲುವ ದೊಡ್ಡ ಸವಾಲು ಕೂಡ ಇದೆ. ಏಕೆಂದರೆ ಭಾನುವಾರ ಏಷ್ಯಾ ಕಪ್ ಟೂರ್ನಿಯಲ್ಲಿ ಬದ್ಧ ಎದುರಾಳಿ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ರೋಹಿತ್ ನಾಯಕರ್ವದ ಸತ್ವಪರೀಕ್ಷೆ ನಡೆಯಲಿದೆ.
ಹತ್ತು ತಿಂಗಳುಗಳ ಹಿಂದಷ್ಟೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ನಾಯಕತ್ವದ ಭಾರತ ತಂಡವು ಪಾಕ್ ಎದುರು ಸೋತಿತ್ತು. ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿಯೇ ಭಾರತವು ತನ್ನ ನೆರೆರಾಷ್ಟ್ರದ ಬಳಗಕ್ಕೆ ಸೋತ ಮೊದಲ ಪಂದ್ಯವಾಗಿತ್ತು. ಆಗ ಹಣಾಹಣಿ ನಡೆದಿದ್ದ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿಯೇಈ ಪಂದ್ಯವೂ ನಡೆಯಲಿದ್ದು ಕುತೂಹಲ ಕೆರಳಿಸಿದೆ.
ಕಳೆದ ಮೂರು ವರ್ಷಗಳಿಂದ ಯಾವುದೇ ಮಾದರಿಯಲ್ಲಿಯೂ ಶತಕ ಬಾರಿಸದ ‘ರನ್ ಯಂತ್ರ’ ವಿರಾಟ್ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ದೀರ್ಘ ವಿಶ್ರಾಂತಿ ಪಡೆದು ಅಂಗಳಕ್ಕೆ ಮರಳಿರುವ ಅವರು ಇಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳುವ ಛಲದಲ್ಲಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ ಹಾಗೂ ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಹಾರ್ದಿಕ್, ಜಡೇಜ, ಅಶ್ವಿನ್ ಅವರ ಮೇಲೆ ಆಲ್‌ರೌಂಡ್ ಆಟದ ಹೊಣೆ ಇದೆ. ಟಿ20 ಪರಿಣತ ಸ್ಪಿನ್ನರ್ ಚಾಹಲ್ ಪಾಕ್ ಬ್ಯಾಟರ್‌ಗಳಿಗೆ ಸವಾಲೆಸೆಯಲು ಸಿದ್ಧರಾಗಿದ್ದಾರೆ. ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ಜವಾಬ್ದಾರಿ ಹೆಚ್ಚಿದೆ.
ಪಾಕ್ ತಂಡದ ಬಾಬರ್ ಆಜಂ, ರಿಜ್ವಾನ್, ಜಮಾನ್ ಅವರ ಬ್ಯಾಟಿಂಗ್‌ಗೆ ತಡೆಯೊಡ್ಡುವುದೇ ಭಾರತದ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು.ಪಾಕ್ ಬೌಲಿಂಗ್ ಪಡೆಯಲ್ಲಿ ಶಾಹೀನ್ ಅಫ್ರಿದಿ ಕೊರತೆ ಕಾಡಲಿದೆ. ಇದು ಭಾರತಕ್ಕೆ ಅನುಕೂಲವೂ ಆಗಬಹುದು.
ನೂರನೇ ಪಂದ್ಯಕ್ಕೆ ಶತಕ ಮೆರಗು ತುಂಬುವರೇ ವಿರಾಟ್?
ವಿರಾಟ್ ಕೊಹ್ಲಿಗೆ ಭಾನುವಾರದ ಪಂದ್ಯವು ಟಿ20 ಮಾದರಿಯಲ್ಲಿ ನೂರನೇಯದ್ದಾಗಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ ನೂರು ಪಂದ್ಯಗಳನ್ನಾಡಿದ ಮೊದಲ ಭಾರತೀಯ ಆಟಗಾರನಾಗಲಿದ್ದಾರೆ.
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅವರು ಇದುವರೆಗೆ ಶತಕ ಬಾರಿಸಿಲ್ಲ. ಅಲ್ಲದೇ ಕಳೆದ ಮೂರು ವರ್ಷಗಳಿಂದ ಯಾವುದೇ ಮಾದರಿಯಲ್ಲಿ ಹಾಗೂ ಐಪಿಎಲ್‌ನಲ್ಲಿಯೂ ಶತಕ ದಾಖಲಿಸಿಲ್ಲ. ಆದ್ದರಿಂದ ಪಾಕ್ ಎದುರಿನ ಪಂದ್ಯದಲ್ಲಿ ಅವರು ತಮ್ಮ ಲಯಕ್ಕೆ ಮರಳುವ ಜೊತೆಗೆ ಶತಕದ ಬರವನ್ನೂ ನೀಗಿಸಿಕೊಳ್ಳುವರೇ ಎಂಬ ಕುತೂಹಲ ಅಭಿಮಾನಿಗಳ ವಲಯದಲ್ಲಿ ಗರಿಗೆದರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.