ಬೆಂಗಳೂರು: 'ಮೈಸೂರು ಎಕ್ಸ್‌ಪ್ರೆಸ್’ ಖ್ಯಾತಿಯ ಜಾವಗಲ್ ಶ್ರೀನಾಥ್ ಅವರು ಐಸಿಸಿ ಪಂದ್ಯ ರೆಫರಿಯಾಗಿ ನೂತನ ಮೈಲುಗಲ್ಲು ಮುಟ್ಟಲಿದ್ದಾರೆ. 250 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಸಾಧನೆಯನ್ನು ಅವರು ಸೋಮವಾರ ಮಾಡಲಿದ್ದಾರೆ.
ಭಾರತ ಮತ್ತು ನೇಪಾಳ ಪಂದ್ಯದಲ್ಲಿ ಅವರು ರೆಫರಿಯಾಗಿ ಕಾರ್ಯನಿರ್ವಹಿಸುವರು. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರೆಫರಿಯಾಗಲಿದ್ದಾರೆ.
ರಂಜನ್ ಮದುಗಲೆ ಕ್ರಿಸ್ ಬ್ರಾಡ್ ಹಾಗೂ ಜೆಫ್ ಕ್ರೋವ್ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. \
‘ಪಂದ್ಯ ರೆಫರಿಯಾಗಿ ಇಂತಹದೊಂದು ಮೈಲುಗಲ್ಲು ಮುಟ್ಟುತ್ತಿರುವುದು ಹೆಮ್ಮೆ ಮತ್ತು ಸಂತಸ ತಂದಿದೆ. 17 ವರ್ಷಗಳಿಂದ ಈ ಹುದ್ದೆಯಲ್ಲಿದ್ದೇನೆ. ಇದೀಗ ನಾನು ಆಟಗಾರನಾಗಿ ಆಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಏಕದಿನ ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದು ಅಚ್ಚರಿ ಮೂಡಿಸುತ್ತಿದೆ‘ ಎಂದು 54 ವರ್ಷದ ಶ್ರೀನಾಥ್ ಹೇಳಿದರು.
‘ಕ್ರಿಕೆಟ್‌ನೊಂದಿಗೆ ನಂಟು ಉಳಿಸಿಕೊಳ್ಳಲು ಈ ರೀತಿ ಅವಕಾಶ ಸಿಕ್ಕಿರುವುದರಿಂದ ನಾನು ಅದೃಷ್ಟಶಾಲಿ. 2006ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಪಂದ್ಯದಲ್ಲಿ ರೆಫರಿಯಾಗಿ ಪದಾರ್ಪಣೆ ಮಾಡಿದ್ದೆ. ಸದಾಕಾಲ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿದ್ದೇನೆ. ಐಸಿಸಿ ಬಿಸಿಸಿಐ ಮತ್ತು ಎಲೀಟ್ ಪ್ಯಾನೆಲ್‌ನಲ್ಲಿರುವ ನನ್ನ ಸಹೋದ್ಯೊಗಿಗಳಿಗೆ ಆಭಾರಿಯಾಗಿರುವೆ. ನನ್ನ ಪಯಣದಲ್ಲಿ ಸದಾ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು‘ ಎಂದು ಶ್ರೀನಾಥ್ ಹೇಳಿದರು.
ವೇಗದ ಬೌಲರ್ ಶ್ರೀನಾಥ್ ಅವರು ಭಾರತ ತಂಡದಲ್ಲಿ 67 ಟೆಸ್ಟ್ ಹಾಗೂ 229 ಏಕದಿನ ಪಂದ್ಯಗಳನ್ನು ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.