ADVERTISEMENT

ಟೀಮ್ ಇಂಡಿಯಾಗೆ ಆಯ್ಕೆಯಾದ ಈಶಾನ್ಯ ಭಾರತದ ಮೊದಲಿಗ ಪರಾಗ್: ಅಸ್ಸಾಂ ಸಿಎಂ ಅಭಿನಂದನೆ

ಪಿಟಿಐ
Published 24 ಜೂನ್ 2024, 16:17 IST
Last Updated 24 ಜೂನ್ 2024, 16:17 IST
ರಾಯಲ್ಸ್‌ನ ರಿಯಾನ್ ಪರಾಗ್
ರಾಯಲ್ಸ್‌ನ ರಿಯಾನ್ ಪರಾಗ್   

ಗುವಾಹಟಿ: ಮುಂಬರುವ ಜಿಂಬಾಬ್ವೆ ವಿರುದ್ಧದ ಟಿ–20 ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಅಸ್ಸಾಂ ಮೂಲದ ರಿಯಾನ್ ಪರಾಗ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಭಾರತ ತಂಡಕ್ಕೆ ಆಯ್ಕೆಯಾದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ರಿಯಾನ್ ಪರಾಗ್ ಪಾತ್ರರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ರಿಯಾನ್ ಅವರನ್ನು ಅಭಿನಂದಿಸಿದ್ದಾರೆ. ಅಸ್ಸಾಂ ಕ್ರೀಡಾ ಕ್ಷೇತ್ರಕ್ಕೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ಹೇಳಿದ್ದಾರೆ.

‘ಇದು ಈ ದಿನದ ಅತ್ಯುತ್ತಮ ಸುದ್ದಿಯಾಗಿದೆ. ನಮ್ಮ ಅಸ್ಸಾಂ ಹುಡುಗ ಈಶಾನ್ಯ ಭಾರತದಿಂದ ಮೆನ್ ಇನ್ ಬ್ಲೂ ಕ್ಲಬ್‌ಗೆ (ಭಾರತ ಕ್ರಿಕೆಟ್ ತಂಡ) ಆಯ್ಕೆಯಾದ ಮೊದಲಿಗರಾಗಿದ್ದಾರೆ’ಎಂದು ಎಕ್ಸ್ ಪೋಸ್ಟ್‌ನಲ್ಲಿ ಶರ್ಮಾ ಹೇಳಿದ್ದಾರೆ.

ADVERTISEMENT

‘ಆತ್ಮೀಯ ರಿಯಾನ್, ಜಿಂಬಾಬ್ವೆ ವಿರುದ್ಧದ ಅಂತರರಾಷ್ಟ್ರೀಯ ಸರಣಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ನಿಮಗೆ ಅಭಿನಂದನೆಗಳು’ ಎಂದೂ ಬರೆದುಕೊಂಡಿದ್ದಾರೆ.

ಕ್ರೀಡೆಯನ್ನು ವೃತ್ತಿಯಾಗಿಸಿಕೊಳ್ಳಲು ಬಯಸುವ ರಾಜ್ಯದ ಯುವಕರಿಗೆ ಸಿಗಬೇಕಾದ ಯಾವುದೇ ಅವಕಾಶವನ್ನು ರಾಜ್ಯ ಸರ್ಕಾರವು ಕೈಚೆಲ್ಲುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ.

ಜುಲೈ 6ರಿಂದ ಭಾರತ ತಂಡದ ಜಿಂಬಾಬ್ವೆ ವಿರುದ್ಧದ ಸರಣಿಯು ಆರಂಭವಾಗಲಿದೆ.

22 ವರ್ಷದ ರಿಯಾನ್ ಪರಾಗ್, 2018ರಿಂದ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡುತ್ತಿದ್ದಾರೆ.

2018ರಲ್ಲಿ ವಿಶ್ವಕಪ್ ಗೆದ್ದ ಭಾರತದ 19 ವರ್ಷದೊಳಗಿನವರ ಭಾರತ ಕ್ರಿಕೆಟ್ ತಂಡದಲ್ಲೂ ರಿಯಾನ್ ಪರಾಗ್ ಇದ್ದರು,.

ಅಸ್ಸಾಂನ ರಣಜಿ ಕ್ರಿಕೆಟಿಗ ಪರಾಗ್ ದಾಸ್ ಮತ್ತು ಖ್ಯಾತ ಈಜು ಪಟು ಮಿಥು ಬರುವಾ ಅವರ ಮಗ ರಿಯಾನ್ ಪರಾಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.