ADVERTISEMENT

ಬೆನ್ನುಮೂಳೆ ಇಲ್ಲದ ಜನರು ಮಾಡುವ ಕೆಲಸ; ಶಮಿಗೆ ಕೊಹ್ಲಿ ಬೆಂಬಲ

ಪಿಟಿಐ
Published 30 ಅಕ್ಟೋಬರ್ 2021, 17:24 IST
Last Updated 30 ಅಕ್ಟೋಬರ್ 2021, 17:24 IST
ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಶಮಿ
ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಶಮಿ   

ದುಬೈ: ಪಾಕಿಸ್ತಾನ ವಿರುದ್ಧ ಸೋಲಿನ ಬಳಿಕ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಧರ್ಮವನ್ನು ಗುರಿಯಾಗಿಸಿ ಎದುರಾಗಿರುವ ವ್ಯಾಪಕ ನಿಂದನೆಯನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಲವಾಗಿ ಖಂಡಿಸಿದ್ದಾರೆ.

'ಧರ್ಮದ ಆಧಾರದಲ್ಲಿ ಯಾರನ್ನಾದರೂ ಆಕ್ರಮಣ ಮಾಡುವುದು ಮಾನವ ಮಾಡಬಹುದಾದ ಅತ್ಯಂತ ಕೀಳುಮಟ್ಟದ ಕೆಲಸವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುವವರು ಬೆನ್ನೆಮೂಳೆ ಇಲ್ಲದ ಜನರ ಗುಂಪು ಆಗಿದ್ದು, ನಿಜ ಜೀವನದಲ್ಲಿ ಜನರನ್ನು ಎದುರಿಸುವ ಧೈರ್ಯ ಅವರಿಗಿಲ್ಲ' ಎಂದು ಸಿಡಿಮಿಡಿಗೊಂಡಿದ್ದಾರೆ.

'ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಮವನ್ನು ಮಂಡಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ವೈಯಕ್ತಿಕವಾಗಿ ನಾನು ಧರ್ಮದ ಮೇಲೆ ತಾರತಮ್ಯ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ. ಅದು ಅತ್ಯಂತ ಪವಿತ್ರ ಹಾಗೂ ವೈಯಕ್ತಿಕ ವಿಷಯವಾಗಿದೆ. ಹಾಗಾಗಿ ಅದನ್ನು ಅಲ್ಲಿಗೆ ಬಿಟ್ಟುಬಿಡಬೇಕು' ಎಂದು ಹೇಳಿದರು.

'ಕಳೆದ ಕೆಲವು ವರ್ಷಗಳಲ್ಲಿ ಮೊಹಮ್ಮದ್ ಶಮಿ ನಮ್ಮ ಪ್ರಮುಖ ಬೌಲರ್ ಆಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಜೊತೆಗೆ ಪರಿಣಾಮಕಾರಿ ಎನಿಸಿಕೊಂಡಿದ್ದಾರೆ. ಆದರೆ ಜನರು ಇದನ್ನು ಕಡೆಗಣಿಸಲು ಬಯಸಿದರೆ ಪ್ರಾಮಾಣಿಕವಾಗಿಯೂ ಅಂತವರಿಗಾಗಿ ನನ್ನ ಜೀವನದ ಅಮೂಲ್ಯ ನಿಮಿಷವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ' ಎಂದು ಹೇಳಿದರು.

'ತಂಡದೆಲ್ಲ ಆಟಗಾರರು ಶಮಿ ಬೆನ್ನಿಗೆ ನಿಂತಿದ್ದಾರೆ. ಯಾವುದೇ ಶಕ್ತಿಗೂ ನಮ್ಮ ಸಹೋದರತ್ವ, ಗೆಳೆತನವನ್ನು ಮುರಿಯಲು ಸಾಧ್ಯವಿಲ್ಲ. ತಂಡದ ನಾಯಕನಾಗಿ ಇಂತಹ ವಿಷಯಗಳು ನುಸುಳದಂತಹ ವಾತಾವರಣವನ್ನು ನಿರ್ಮಿಸಿದ್ದೇನೆ ಎಂದು ನಿಮಗೆ ಖಾತರಿ ನೀಡಬಲ್ಲೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.