ಸಿಡ್ನಿ: ಎರಡು ವರ್ಷಗಳ ನಂತರ ಟೆಸ್ಟ್ ಕಣಕ್ಕೆ ಮರಳಿದ ಉಸ್ಮಾನ್ ಖ್ವಾಜಾ ಎರಡನೇ ಶತಕ ಸಿಡಿಸಿ ಮಿಂಚಿದರು. ಯುವ ಆಟಗಾರ ಕ್ಯಾಮರಾನ್ ಗ್ರೀನ್ ಜೊತೆ ಶತಕದ ಜೊತೆಯಾಟವನ್ನೂ ಆಡಿದರು. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದೆ.
388 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಪ್ರವಾಸಿ ಇಂಗ್ಲೆಂಡ್ ತಂಡ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯಗೊಂಡಾಗ ವಿಕೆಟ್ ಕಳೆದುಕೊಳ್ಳದೆ 30 ರನ್ ಗಳಿಸಿದ್ದು ಜಯ ಗಳಿಸಲು ಇನ್ನೂ 358 ರನ್ ಬೇಕಾಗಿದೆ.
ಜಾನಿ ಬೇಸ್ಟೋ ಅವರ ಶತಕದ ನೆರವಿನಿಂದ ಮೂರನೇ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 7ಕ್ಕೆ 258 ರನ್ ಗಳಿಸಿತ್ತು. ಶನಿವಾರ ಬೆಳಿಗ್ಗೆ ಈ ಮೊತ್ತಕ್ಕೆ 36 ರನ್ ಸೇರಿಸಿ ಆಲೌಟಾಯಿತು. ಮೂರು ಪಂದ್ಯಗಳನ್ನು ಗೆದ್ದು ಸರಣಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿರುವ ಆಸ್ಟ್ರೇಲಿಯಾ ವೇಗವಾಗಿ ರನ್ ಗಳಿಸಿ ಎದುರಾಳಿ ತಂಡಕ್ಕೆ ಗುರಿ ನೀಡಲು ಮುಂದಾಯಿತು.
ಡೇವಿಡ್ ವಾರ್ನರ್ 6ನೇ ಓವರ್‌ನಲ್ಲಿ ಮರಳಿದರು. ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬಶೇನ್ ಮತ್ತು ಸ್ಟೀವ್ ಸ್ಮಿತ್ ಔಟಾದಾಗ ತಂಡದ ಮೊತ್ತ 86 ರನ್ ಆಗಿತ್ತು. ಈ ಸಂದರ್ಭದಲ್ಲಿ ಜೊತೆಗೂಡಿದ ಉಸ್ಮಾನ್ ಖ್ವಾಜಾ (ಔಟಾಗದೆ 101; 138 ಎಸೆತ, 10 ಬೌಂಡರಿ, 2 ಸಿಕ್ಸರ್) ಮತ್ತು ಕ್ಯಾಮರಾನ್ ಗ್ರೀನ್ (74; 122 ಎ, 7 ಬೌಂ, 1 ಸಿ) 179 ರನ್‌ಗಳ ಜೊತೆಯಾಟವಾಡಿದರು.
30 ತಿಂಗಳ ನಂತರ ಕ್ರೀಸ್‌ಗೆ ಮರಳಿದ ಪಾಕಿಸ್ತಾನ ಮೂಲದ ಖ್ವಾಜಾ ಮೊದಲ ಇನಿಂಗ್ಸ್‌ನಲ್ಲಿ 137 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ 101 ರನ್ ಗಳಿಸಿದರು. ಈ ಮೂಲಕ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾದ 3ನೇ ಆಟಗಾರ ಎನಿಸಿದರು.ಈ ಮೊದಲು ಆಸ್ಟ್ರೇಲಿಯಾದವರೇ ಆದ ಡೌಗ್ ವಾಲ್ಟರ್ಸ್ (ವೆಸ್ಟ್ ಇಂಡೀಸ್ ವಿರುದ್ಧ1968/69ರಲ್ಲಿ) ಮತ್ತು ರಿಕಿ ಪಾಂಟಿಂಗ್ (ದಕ್ಷಿಣ ಆಫ್ರಿಕಾ ವಿರುದ್ಧ2005/06ರಲ್ಲಿ)ಸಿಡ್ನಿಯಲ್ಲಿಆಡಿದ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಮೂರಂಕಿ ದಾಟಿದ್ದರು.ಒಟ್ಟಾರೆ ಈ ಸಾಧನೆ ಮಾಡಿದ ದೇಶದ ಆರನೇ ಬ್ಯಾಟರ್ ಆಗಿದ್ದಾರೆ ಖ್ವಾಜಾ.
ಇಂಗ್ಲೆಂಡ್ ಬೌಲರ್‌ಗಳನ್ನು ನಿರಾಯಾಸವಾಗಿ ಎದುರಿಸಿದ ಖ್ವಾಜಾ 138 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ಮೂರಂಕಿ ಮೊತ್ತ ದಾಟಿದರು. ಅವರೊಂದಿಗೆ ಸೊಗಸಾಗಿ ಬ್ಯಾಟ್ ಬೀಸಿದ ಗ್ರೀನ್ ಎರಡನೇ ಅರ್ಧಶತಕ ಗಳಿಸಿದರು. ಜ್ಯಾಕ್ ಲೀಚ್ ಎಸೆತದಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ಮರಳಿದರು. ಅಲೆಕ್ಸ್ ಕ್ಯಾರಿ ಮೊದಲ ಎಸೆತದಲ್ಲೇ ಔಟಾಗುತ್ತಿದ್ದಂತೆ ನಾಯಕ ಪ್ಯಾಟ್ ಕಮಿನ್ಸ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಸಿಡ್ನಿಯಲ್ಲಿ 300ಕ್ಕೂ ಹೆಚ್ಚು ರನ್‌ಗಳ ಗುರಿ ಬೆನ್ನತ್ತಿ ಯಾವ ತಂಡವೂ ಜಯ ಗಳಿಸಿಲ್ಲ. ದಕ್ಷಿಣ ಆಫ್ರಿಕಾ ಎದುರು 2 ವಿಕೆಟ್‌ಗಳಿಗೆ 288 ರನ್ ಗಳಿಸಿದ ಆಸ್ಟ್ರೇಲಿಯಾ 2006ರಲ್ಲಿ ಇಲ್ಲಿ ಜಯಿಸಿತ್ತು. ಯಾವುದೇ ಪ್ರವಾಸಿ ತಂಡಕ್ಕೆ ನಾಲ್ಕನೇ ಇನಿಂಗ್ಸ್‌ನಲ್ಲಿ 200 ರನ್‌ಗಳ ಮೊತ್ತ ದಾಟಲು ಆಗಲಿಲ್ಲ.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಆಸ್ಟ್ರೇಲಿಯಾ: 8ಕ್ಕೆ 416
ಇಂಗ್ಲೆಂಡ್ (ಶುಕ್ರವಾರ 70 ಓವರ್‌ಗಳಲ್ಲಿ 7ಕ್ಕೆ 258:79.1 ಓವರ್‌ಗಳಲ್ಲಿ 294 (ಜಾನಿ ಬೇಸ್ಟೊ ಬ್ಯಾಟಿಂಗ್ 113, ಜ್ಯಾಕ್ ಲೀಚ್ ಬ್ಯಾಟಿಂಗ್ 10, ಸ್ಟುವರ್ಟ್ ಬ್ರಾಡ್ 15, ಜೇಮ್ಸ್ ಆ್ಯಂಡರ್ಸನ್ ಔಟಾಗದೆ 4; ಪ್ಯಾಟ್ ಕಮಿನ್ಸ್ 68ಕ್ಕೆ2, ಮಿಚೆಲ್ ಸ್ಟಾರ್ಕ್ 56ಕ್ಕೆ1, ಸ್ಕಾಟ್ ಬೊಲ್ಯಾಂಡ್ 36ಕ್ಕೆ4, ಕ್ಯಾಮರಾನ್ ಗ್ರೀನ್ 24ಕ್ಕೆ1, ನೇಥನ್ ಲಯನ್ 88ಕ್ಕೆ1)
ಎರಡನೇ ಇನಿಂಗ್ಸ್
ಆಸ್ಟ್ರೇಲಿಯಾ: 68.5 ಓವರ್‌ಗಳಲ್ಲಿ 6ಕ್ಕೆ265 ಡಿಕ್ಲೇರ್ (ಮಾರ್ಕಸ್ ಹ್ಯಾರಿಸ್ 27, ಡೇವಿಡ್ ವಾರ್ನರ್ 3, ಮಾರ್ನಸ್ ಲಾಬುಷೇನ್ 29, ಸ್ಟೀವನ್ ಸ್ಮಿತ್ 23, ಉಸ್ಮಾನ್ ಖ್ವಾಜಾ ಔಟಾಗದೆ 101, ಕ್ಯಾಮರಾನ್ ಗ್ರೀನ್ 74; ಮಾರ್ಕ್ ವುಡ್65ಕ್ಕೆ2, ಜ್ಯಾಕ್ ಲೀಚ್84ಕ್ಕೆ4)
ಇಂಗ್ಲೆಂಡ್:11 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 30 (ಜಾಕ್ ಕ್ರಾವ್ಲಿ 22, ಹಸೀಬ್ ಹಮೀದ್ 8).
ಇವನ್ನೂ ಓದಿ
*ಆ್ಯಷಸ್ ಕ್ರಿಕೆಟ್ ಟೆಸ್ಟ್: ಖ್ವಾಜಾ ಶತಕದ ಸೊಬಗು
*ಆ್ಯಷಸ್ ಟೆಸ್ಟ್ ಸರಣಿಯ ಪಿಂಕ್ ಡೇ: ನೋವುಂಡ ಬೇಸ್ಟೋಗೆ ಶತಕದ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.